

ನುಗ್ಗೇಹಳ್ಳಿ: ಸಮೀಪದ ಗಂಜಲಘಟ್ಟ ಗ್ರಾಮದ ಪುರಾಣ ಪ್ರಸಿದ್ಧ ಶ್ರೀದೇವಮ್ಮ ದೇವಿ ಹಾಗೂ ಕೊಲ್ಲಾಪುರದಮ್ಮನವರ ಬ್ರಹ್ಮರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಮೂಲ ದೇವರಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮಹಾಮಂಗಳಾರತಿ ನೆರವೇರಿತು. ನಂತರ ಹೂವಿನ ಅಲಂಕೃತ ರಥದಲ್ಲಿ ದೇವಮ್ಮ ದೇವಿ ಕೊಲ್ಲಾಪುರದಮ್ಮನವರ ಮೆರೆ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನಂತರ ರಥವನ್ನು ದೇವಾಲಯದವರೆಗೂ ಎಳೆಯಲಾಯಿತು.
ಗಂಜಲಘಟ್ಟ ಹಾಗೂ ಸುತ್ತಲಿನ ಯಾಚನಘಟ್ಟ, ಮಸನಘಟ್ಟ, ನಾಗೇನಹಳ್ಳಿ, ಮೂಡಲಕೊಪ್ಪಲು, ವೆಂಕಟಪುರ, ಭುವನಹಳ್ಳಿ, ಕಂಪಾರ ಹಳ್ಳಿ, ಬಿಸಲೇಹಳ್ಳಿ ರಾಜ್ಯದ ಇತರ ಊರುಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ ರಥಕ್ಕೆ ದವನ, ಹಣ್ಣು-ಕಾಯಿ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜ್, ಗ್ರಾಮ ಪಂಚಾಯಿತಿ ಸದಸ್ಯೆ ಆಶಾ ಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುವರ್ಣಮ್ಮ ಗಂಗಾಧರ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಮೇಗೌಡ, ಮುಖಂಡರಾದ ಗುಡಿಗೌಡ ಯೋಗೇಶ್, ಪಟೇಲ್ ತಿಮ್ಮೇಗೌಡ, ಚೆನ್ನೇಗೌಡ, ಎಂ.ಎಚ್. ಹರೀಶ್, ಪಟೇಲ್ ಸತೀಶ್ ಹಾಗೂ ಭಕ್ತರು ಹಾಜರಿದ್ದರು.