ಶ್ರೀಚಾಮರಾಜೇಶ್ವರಸ್ವಾಮಿ ರಥ ಚಲನ ಪೂಜೆ

20rajesh8
Published on

ಚಾಮರಾಜನಗರ: ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಜು.10 ರಂದು ನಡೆಯಲಿರುವ ಆಷಾಢ ಮಾಸದ ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ರಥಕ್ಕೆ ಶುಕ್ರವಾರ ಚಲನಪೂಜೆ ನೆರವೇರಿಸಲಾಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ರಥಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ದರ್ಶನ್ ಅವರ ನೇತೃತ್ವದಲ್ಲಿ ರಥ ಚಲನ ಪೂಜೆಯನ್ನು ಸಲ್ಲಿಸಲಾಯಿತು.

ಈ ವೇಳೆ ಶ್ರೀಮಾರಾಜೇಶ್ವರಸ್ವಾಮಿಯ ವಿಗ್ರಹವನ್ನು ವಿವಿಧ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ರಥಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ, ರಥ ಚಲನ ಪೂಜೆಯೂ ರಥೋತ್ಸವದ ಅತ್ಯಂತ ಮಹತ್ವದ ಭಾಗವಾಗಿದೆ. ಈ ಪೂಜೆಯಿಂದ ರಥವು ಸುಗಮವಾಗಿ ಚಲಿಸುತ್ತದೆ ಎಂಬ ಪ್ರತೀತಿ ಇದೆ. ಭಕ್ತರಿಗೂ ಕೂಡ ರಥೋತ್ಸವ ವೇಳೆಯಲ್ಲಿ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ನಂಬಿಕೆ ಇದಾಗಿದೆ. ಶ್ರೀಚಾಮರಾಜೇಶ್ವರಸ್ವಾಮಿ ಮೇಲಿನ ಗೌರವ ಮತ್ತು ಭಕ್ತಿಯಲ್ಲಿ ನಾವೆಲ್ಲರೂ ಭಾಗಿಯಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಅರ್ಚಕ ನಾಗರಾಜ ದೀಕ್ಷಿತ್, ಅನಿಲ್‌ಕುಮಾರ್ ದಿಕ್ಷೀತ್, ರಾಮಕೃಷ್ಣ ಭಾರಧ್ವಜ್, ಶ್ರೇಯಶ್, ಅಣ್ಣಾಜಿ, ಚಿಕ್ಕಣ್ಣ, ಉತ್ಸವ ಸಮಿತಿಯ ಸದಸ್ಯರಾದ ಜಯಕುಮಾರ್, ಸ್ವಾಮಿ, ಸುರೇಶ್, ದೇವರಾಜ್, ನಾಗೇಶ್, ಪ್ರವೀಣ್, ಪ್ರಜ್ವಲ್, ಗಣಪತಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net