ಶ್ರೀಚನ್ನಕೇಶವಸ್ವಾಮಿ ರಥೋತ್ಸವಕ್ಕೆ ಸಿದ್ಧತೆ

2blrp1.
Published on

ಬೇಲೂರು: ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಪ್ರಾರಂಭಕ್ಕೂ ಮೊದಲು ಕುರ್‌ಆನ್ ಪಠಣ ಮಾಡುವ ಬಗ್ಗೆ ಹಿಂದುಪರ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳ ಪರ-ವಿರೋಧದ ಗೊಂದಲಕ್ಕೆ ಸಿಲುಕಿರುವ ದೇಗುಲದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಧಾರ್ಮಿಕ ದತ್ತಿ ಆಯುಕ್ತರಿಗೆ ಪತ್ರ ಬರೆದು ಆದೇಶಕ್ಕಾಗಿ ಕಾಯುತ್ತಿರುವ ನಡುವೆಯೇ ರಥೋತ್ಸವಕ್ಕಾಗಿ ರಥದ ಸಿದ್ಧತೆ ಭರದಿಂದ ಸಾಗಿದೆ.

ಕರೊನಾ ಕಾರಣದಿಂದ ಎರಡು ವರ್ಷ ಶ್ರೀಚನ್ನಕೇಶವಸ್ವಾಮಿ ರಥೋತ್ಸವ ನಡೆದಿರಲಿಲ್ಲ. ಆದರೆ ಕಳೆದ ವರ್ಷ ರಥೋತ್ಸವಕ್ಕೆ ಎಲ್ಲ ಸಿದ್ಧತೆ ನಡೆದಿದ್ದ ಸಂದರ್ಭ ದೇವಸ್ಥಾನದ ಆವರಣದಲ್ಲಿ ಹಿಂದುಯೇತರರಿಗೆ ವ್ಯಾಪಾರ, ವಹಿವಾಟು ಮತ್ತು ರಥೋತ್ಸವ ಸಂದರ್ಭ ಕುರ್‌ಆನ್ ಪಠಣಕ್ಕೆ ಅವಕಾಶ ನೀಡದಂತೆ ಹಿಂದುಪರ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಅದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರೂ ಪ್ರತಿಭಟಿಸಿ ವ್ಯಾಪಾರ ಮತ್ತು ಕುರ್‌ಆನ್ ಪಠಣಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಇಲಾಖೆಯಿಂದ ರಥೋತ್ಸವ ಸಂದರ್ಭ ಅಧಿಕೃತವಾಗಿ ಕುರ್‌ಆನ್ ಪಠಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿಯೂ ಹಿಂದುಪರ ಸಂಘಟನೆಗಳು ಪುನಃ ರಥೋತ್ಸವದಂದು ಕುರ್‌ಆನ್ ಪಠಣಕ್ಕೆ ಅವಕಾಶ ಕಲ್ಪಿಸದಂತೆ ಒತ್ತಾಯಿಸಿ ಪ್ರತಿಭಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೆ, ಇದರ ವಿರುದ್ಧವಾಗಿಯೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕುರ್‌ಆನ್ ಪಠಣಕ್ಕೆ ಅವಕಾಶ ಕೋರಿ ಪ್ರತಿಭಟಿಸಿದ್ದಾರೆ.

ಈ ಎಲ್ಲ ಬೆಳವಣಿಗೆಯ ನಡುವೆಯೇ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮಿಕ ಪಂಡಿತ ವಿಜಯ್ ಕುಮಾರ್, ಕಳೆದ ಗುರುವಾರ ಬೇಲೂರಿನ ದೇಗುಲಕ್ಕೆ ಆಗಮಿಸಿ ದೇಗುಲದಲ್ಲಿದ್ದ ಮ್ಯಾನ್ಯೂಯಲ್ ಕೈಪಿಡಿ ಪರಿಶೀಲಿಸಿ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿಯವರೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಇಲಾಖೆಯ ಆಯುಕ್ತರಿಗೆ ವರದಿ ನೀಡುವುದಾಗಿ ತಿಳಿಸಿ ಹೋಗಿದ್ದರು. ಆದರೆ ಇಲ್ಲಿಯವರೆಗೂ ಅಧಿಕೃತವಾಗಿ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲವಾದ ಕಾರಣ ಮಂಗಳವಾರ ನಡೆಯಲಿರುವ ಬ್ರಹ್ಮ ರಥೋತ್ಸವದಂದು ಕುರ್‌ಆನ್ ಪಠಣ ಆಚರಣೆ ಹಳೇ ಸಂಪ್ರದಾಯದಂತೆ ನಡೆಯುತ್ತದೆಯೋ ಅಥವಾ ಹೊಸ ಸಂಪ್ರದಾಯಕ್ಕೇನಾದರೂ ಮುನ್ನುಡಿ ಬರೆಯುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೂ ಮಂಗಳವಾರ ಮತ್ತು ಬುಧವಾರ ನಡೆಯಲಿರುವ ಶ್ರೀ ಚನ್ನಕೆಶವಸ್ವಾಮಿ ಬ್ರಹ್ಮರಥೋತ್ಸವ ಮತ್ತು ನಾಡಿನ ರಥೋತ್ಸವಕ್ಕಾಗಿ ರಥದ ಸಿದ್ಧತೆಯಲ್ಲಿ ಕಾರ್ಮಿಕರು, ದೇಗುಲದ ಅಡ್ಡೆಗಾರರು ಮತ್ತು ಸಿಬ್ಬಂದಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net