

ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಸೋಮವಾರ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸರಸ್ವತಿ ಪೂಜೆ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ ನಡೆಯಿತು.
ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಅಕ್ಷರಾಭ್ಯಾಸ ಅಥವಾ ವಿದ್ಯಾರಂಭ ನಡೆಸುವ ಪದ್ಧತಿ ಇರುವುದರಿಂದ ಪಾಲಕರು ಮಕ್ಕಳನ್ನು ಶ್ರೀಮಠಕ್ಕೆ ಕರೆತಂದು ಶ್ರೀಗಳಿಂದ ಅಕ್ಷರಭ್ಯಾಸ ಮಾಡಿಸಿದರು.
ಅಕ್ಷರಭ್ಯಾಸಕ್ಕೂ ಮುನ್ನ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕರಿಸಿದ ಸರಸ್ವತಿ ದೇವಿಯ ಸನ್ನಿಧಿಯಲ್ಲಿ ಗಣಪತಿ ಪೂಜೆ ನೆರವೇರಿಸಲಾಯಿತು. ನಂತರ ಸರಸ್ವತಿ ವಿಗ್ರಹಕ್ಕೆ ಹಾಲಿನ ಅಭಿಷೇಕ ನೆರವೇರಿಸಿ ಮಕ್ಕಳಿಗೆ ಅಕ್ಷರಭ್ಯಾಸ ಕ್ರಿಯೆಯನ್ನು ಶ್ರೀಗಳು ಆರಂಭಿಸಿದರು. ದೊಡ್ಡ ತಟ್ಟೆಯಲ್ಲಿ ಅಕ್ಕಿಯನ್ನು ಇರಿಸಿ ಅದರಲ್ಲಿ ಮಕ್ಕಳ ಕೈಹಿಡಿದುಕೊಂಡು ನವಿಲುಗರಿಯ ಮೂಲಕ ಓಂ ಬೀಜಾಕ್ಷರವನ್ನು ಬರೆಸುವ ಮೂಲಕ ಅಕ್ಷರಭ್ಯಾಸ ಮಾಡಿಸಿದರು. 50ಕ್ಕೂ ಹೆಚ್ಚು ಮಕ್ಕಳು ಜಾತಿ ಧರ್ಮ ಬೇಧವಿಲ್ಲದೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಜೆ ಶಿವಮೊಗ್ಗ ಶಾಖಾಮಠದ ವತಿಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ತಾಲೂಕಿನ ಗೋವಿಂದಘಟ್ಟ, ಮೂಡಲಮೆಳ್ಳಹಳ್ಳಿ, ಕನ್ನೇನಹಳ್ಳಿ, ದೊಡ್ಡೇಗೌಡನಕೊಪ್ಪಲು, ಕೆಲಗೆರೆ, ದೇವೇಗೌಡನಕೊಪ್ಪಲು, ಗೌಡರಹಳ್ಳಿ, ಅರೇಹಳ್ಳಿ, ನರಗನಹಳ್ಳಿ ಮತ್ತು ಚೋಳೇನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಚೈತನ್ಯನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳು ಶ್ರೀಗಳು ಉಪಸ್ಥಿತರಿದ್ದರು.