

ಹಾಸನ: ಬೈಕಿನಲ್ಲಿ ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೇಲೂರು ತಾಲೂಕಿನ ಅರೇಹಳ್ಳಿಯ ಅಂಬೇಡ್ಕರ್ ವೃತ್ತದ ಹತ್ತಿರ ತೊಳಲು ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅರೇಹಳ್ಳಿ ಹಳೇ ಮಸೀದಿ ಬೀದಿಯ ಬ್ಯಾಟರಂಗ (38) ಹಾಗೂ ಬೇಲೂರು ತಾಲೂಕಿನ ಕಿತ್ತಾವರ ಗ್ರಾಮದ ಸಂದೀಪ (30) ಬಂಧಿತ ಆರೋಪಿಗಳು.
ಭಾನುವಾರ ಬೆಳಗ್ಗಿನ ಜಾವ 3.30ರ ಸಮಯದಲ್ಲಿ ಅರೇಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಲಿಂಗರಾಜು ಅವರು ಗಸ್ತಿನಲ್ಲಿ ಇದ್ದಾಗ ಇಬ್ಬರು ವ್ಯಕ್ತಿಗಳು ಬೈಕಿನಲ್ಲಿ ಅರೇಹಳ್ಳಿಯ ಅಂಬೇಡ್ಕರ್ ವೃತ್ತದ ಹತ್ತಿರ ತೊಳಲು ರಸ್ತೆಯ ಕಡೆಯಿಂದ ಬರುತ್ತಿದ್ದರು. ಈ ವೇಳೆ ಅವರ ಬಳಿ ಅನುಮಾನಾಸ್ಪದವಾಗಿ ಇದ್ದ ಬ್ಯಾಗ್ ಅನ್ನು ಲಿಂಗರಾಜ್ ಅವರು ಪರಿಶೀಲಿಸಿದಾಗ ಸುಮಾರು ಎಂಟು ಇಂಚು ಉದ್ದದ 16 ಶ್ರೀಗಂಧದ ತುಂಡುಗಳಿದ್ದವು. ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಕಾರಣ ಕೂಡಲೇ ಅವರನ್ನು ವಶಕ್ಕೆ ಪಡೆದು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.