ಶ್ರೀಗಂಧ ಬೆಳೆಗಾರರ ಪ್ರಾಣಕ್ಕೆ ಕುತ್ತು! ; ಕಳ್ಳರ ಹಾವಳಿಗೆ ಹೆದರಿ ಮರಗಳನ್ನೇ ಕಡಿಯಲು ಮುಂದಾದ ರೈತರು

21TMK_Sriganda
Published on

ತುಮಕೂರು : ಸಾಂಪ್ರದಾಯಿಕ ಕೃಷಿಯಿಂದಾಗುವ ನಷ್ಟದಿಂದ ಪಾರಾಗಲು ಜಿಲ್ಲೆಯಲ್ಲಿ ಶ್ರೀಗಂಧ ಬೆಳೆಯಲು ಮುಂದಾದ ರೈತರ ಸ್ಥಿತಿ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎನ್ನುವಂತಾಗಿದೆ.

ಜಿಲ್ಲೆಯ 300 ಎಕರೆಗೂ ಹೆಚ್ಚು ಭೂಪ್ರದೇಶದಲ್ಲಿ ಶ್ರೀಗಂಧ ಬೆಳೆಯುವ ರೈತರು ಅಕ್ಷರಶಃ ಜೀವಭಯದಿಂದ ನರಳುತ್ತಿದ್ದಾರೆ, ಶ್ರೀಗಂಧದ ಮರಗಳನ್ನು ಕಳ್ಳರು ಹೊತ್ತೊಯ್ಯುತ್ತಿದ್ದು ರೈತರ ಸಂಕಟ ಹೇಳತೀರದು. ಯಾಕಾದರೂ ಶ್ರೀಗಂಧ ಬೆಳೆದೆವೋ ಎಂದು ಶಪಿಸಿಕೊಳ್ಳುತ್ತ ಆಳುದ್ದಕ್ಕೆ ಬೆಳೆದ ಬೆಳೆಯನ್ನೇ ಕಿತ್ತು ಹಾಕುತ್ತಿದ್ದಾರೆ.

ಜಿಲ್ಲೆಯ ಬಹುತೇಕ ಭಾಗದಲ್ಲಿ ಕೆಲವು ಯುವ ರೈತರು ಕಳೆದ 15 ವರ್ಷಗಳಿಂದ ಶ್ರೀಗಂಧ ಬೆಳೆಯಲು ಮುಂದಾಗಿದ್ದು, ಈಗ ಬುಡ ದಪ್ಪವಾಗಿದ್ದೇ ತಡ ಕಳ್ಳರ ಕಣ್ಣುಬಿದ್ದಿದೆ, ಕಾಯಲು ನಿಂತರೆ ಪ್ರಾಣವನ್ನೇ ತೆಗೆಯುವ ಕಟುಕರಿಗೆ ಹೆದರಿಗೆ ರೈತರು ಆಕ್ರೋಶಗೊಂಡು ಮರಗಳನ್ನೇ ಕಡಿದೆಸೆಯಲು ಮುಂದಾಗಿದ್ದಾರೆ.

ಬೆಳೆದ ಶ್ರೀಗಂಧದ ಬೆಳೆ ರಕ್ಷಿಸಿಕೊಳ್ಳಲಾಗದೆ ಇನ್ನೊಂದಡೆ ಮಾರುಕಟ್ಟೆಗೂ ತೆಗೆದುಕೊಂಡು ಹೋಗಲಾಗದ ರೈತರು, ಎಳೆಯ ಮರಗಳನ್ನು ಕಡಿಯಲಾರಂಭಿಸಿದ್ದಾರೆ. ಇರುವ ಮರಗಳನ್ನು ಕಳ್ಳರು ಯಾವುದೇ ಕಾರಣಕ್ಕೂ ಬಿಡುತ್ತಿಲ್ಲ, ಕಳವಾಗಿದೆ ಎಂದು ಠಾಣೆಗೆ ದೂರು ನೀಡಿದರೂ ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂಬ ಆರೋಪವಿದೆ.

ಇನ್ನೊಂದಡೆ ರೈತರು ತಾವು ಬೆಳೆ ಬೆಳೆದಿದ್ದೇವೆ ಎಂದು ಹೇಳಿಕೊಳ್ಳಲು ಹೆದರುತ್ತಿದ್ದಾರೆ, ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟ ಕೂಡಲೇ ಮರ ಕಳುವಾಗುತ್ತಿರುವುದು ರೈತರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸ್ವರಕ್ಷಣೆಗೆ ಪಡೆಯುವ ಬಂದೂಕು ಮನೆಯಲ್ಲಿರುವುದಕ್ಕಿಂತ ವಿವಿಧ ಚುನಾವಣೆ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿರುವುದೇ ಜಾಸ್ತಿ ಎನ್ನುವುದು ರೈತರ ಅಳಲಾಗಿದೆ.

ಚಿನ್ನದಂತಹ ಬೆಲೆ ಇದ್ದರೂ ಶ್ರೀಗಂಧ ಬೆಳೆದರೆ ಜೀವಕ್ಕೆ ಕುತ್ತು ಎನ್ನುವಂತಾಗಿದೆ, ಇತ್ತ ಬೆಳೆದ ಮರಕ್ಕೆ ಮಾರುಕಟ್ಟೆ ಹೇಗೆ ಎಂಬುದು ಚಿಂತೆ, ಲೈಸೆನ್ಸ್ ಸಿಕ್ಕರೂ ಬಂದೂಕು ಉಪಯೋಗಿಸೋದು ರೈತರಿಗೆ ಗೊತ್ತಿಲ್ಲ. ಮರಗಳ್ಳರಿಗೆ ಪೊಲೀಸರ ಭಯವೂ ಇಲ್ಲ ಎಂಬಂತಾಗಿದೆ.

ಪ್ರತಿವರ್ಷ 3 ಲಕ್ಷ ಶ್ರೀಗಂಧ ಸಸಿ ನೆಡಿಸಲಾಗುತ್ತಿದೆ, ಈ ವರ್ಷ 1.50 ಲಕ್ಷ ಸಸಿ ಮೇ ತಿಂಗಳಲ್ಲಿ ನೀಡುತ್ತೇವೆ, 15 ವರ್ಷಕ್ಕೆ ಮರ ಕಟಾವಿಗೆ ಬರಲಿದ್ದು ಲಾಭ ಬರಲಿದೆ, ಅರಣ್ಯ ಇಲಾಖೆ, ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿ.,, ಕೆಎಸ್‌ಎ್ಸಿಗೆ ಸುಲಭವಾಗಿ ಮಾರಲು ಅವಕಾಶವಿದೆ. ಮಧುಗಿರಿ ನಾಮಧಾರಿ ಆವರಣದಲ್ಲಿ 15 ಎಕರೆ ಭೂಮಿಯಲ್ಲಿ ಕಟಾವಿಗೆ ಬಂದಿದೆ. ಮರ ಕಾಯಲು ನಾಯಿಗಳನ್ನು ಸಾಕಿ ಕಾಪಾಡಿಕೊಳ್ಳಬೇಕು, ಮರ ರಕ್ಷಣೆಯ ಹೊಣೆ ರೈತರಿಗೆ ಸೇರಿದ್ದು. ಗಿರೀಶ್ ಡಿಎ್ಒ ಶ್ರೀಗಂಧ ಬೆಳೆದರೂ ಮಾರುವುದು ಸುಲಭವಲ್ಲ, ಅರಣ್ಯ ಇಲಾಖೆ ಸರಿಯಾದ ಮಾಹಿತಿ ನೀಡುವುದಿಲ್ಲ, ಮರ ಕದ್ದರೂ ಪೊಲೀಸರು ದೂರು ಸ್ವೀಕರಿಸುವುದಿಲ್ಲ, ಬಂದೂಕು ಪಡೆಯಿರಿ ಎಂದು ಉಚಿತ ಸಲಹೆ ನೀಡ್ತಾರೆ, ಅದು ಅಷ್ಟು ಸುಲಭವಲ್ಲ. ಕಳ್ಳರಿಗಾಗಿ ಶ್ರೀಗಂಧ ಬೆಳೆಯುವಂತಾಗಿದೆ. ರಘು ಶ್ರೀಗಂಧ ಬೆಳೆಗಾರ ಅರಣ್ಯ ಇಲಾಖೆ ಗಿಡ ಕೊಡುತ್ತೆ. ನಾವು ಹಾಕಿ ಬೆಳೆಸುತ್ತೇವೆ. ಆದರೆ, ಮಾರಾಟದ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ಕಳ್ಳತನ ನಿರಾತಂಕವಾಗಿ ನಡೆಯುತ್ತದೆ. ಇದರ ಬಗ್ಗೆ ದೂರು ನೀಡಿದರೆ ಪೊಲೀಸರು ದೂರು ಸ್ವೀಕರಿಸುವುದಿಲ್ಲ. ಅವರನ್ನು ಕಂಡುಹಿಡಿಯುವುದಿಲ್ಲ. ಶ್ರೀಗಂಧ ಮರೆಯುವ ಬದಲಾಗಿ ಕಾಡುಮರ ಬೆಳೆದರೆ ಸಾಕು, ಜೀವ ಭಯದಿಂದ ಮರಗಳನ್ನು ಕಿತ್ತು ಬೀಸಾಕಲು ಮುಂದಾಗಿದ್ದೇವೆ. ಚೇತನ್ ಶ್ರೀಗಂಧ ಬೆಳೆಗಾರ, ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net