

ಯಾದಗಿರಿ: ಶ್ರೀಗಂಧದ ಕಟ್ಟಿಗೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ ಅರಣ್ಯಾಕಾರಿಗಳು ವ್ಯಕ್ತಿಯೊಬ್ಬನನ್ನು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ಹತ್ತಿಕುಣಿ ಗ್ರಾಮ ಸಮೀಪದ ಬಗ್ಗಲಮಡು-ಸೇಡಂ ಹೆದ್ದಾರಿಯಲ್ಲಿ ಶ್ರೀಗಂಧ ಕಟ್ಟಿಗೆ ಸಾಗಿಸುತ್ತಿದ್ದ ಮಾಹಿತಿ ಮೆರೆಗೆ ಅಕಾರಿಗಳ ದಾಳಿ ನಡೆಸಿದ್ದಾರೆ. 150 ಕೆಜಿ ಗಂಧದ ಕಟ್ಟಿಗೆ ಅಂದಾಜು 15 ಲಕ್ಷ ರೂ.ಮೌಲ್ಯದ್ದಾಗಿದೆ. ಮಹಾರಾಷ್ಟ್ರ ರಾಜ್ಯದ ನೋಂದಣಿ ಇರುವ 4678 ಬಿಳಿ ಬಣ್ಣದ ಕಾರಿನಲ್ಲಿ ಗಂಧದ ಕಟ್ಟಿಗೆಗಳನ್ನು ವ್ಯವಸ್ಥಿತವಾಗಿ ಪೇರಿಸಿಡಲಾಗಿತ್ತು. ಸಾಗಾಟಕ್ಕೆ ಬಳಸುತ್ತಿದ್ದ ಬೈಕ್ ಹಾಗೂ ಎರಡು ಕೊಡಲಿಗಳು ಜಪ್ತಿ ಮಾಡಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯ ಮೂಲದ ಸಚಿನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೈಕ್ ಚಾಲಕ ಪಾಂಡುರಂಗ ಎಂಬಾತ ನಾಪತ್ತೆಯಾಗಿದ್ದು ಆತನ ಪತ್ತೆಗೆ ಜಾಲ ಬೀಸಲಾಗಿದೆ. ಅರಣ್ಯಪ್ರದೇಶಕ್ಕೆ ತೆರಳಿ ಬೆಲೆ ಬಾಳುವ ಶ್ರೀಗಂಧ ಮರ ಕಡಿದು ವಿದೇಶಕ್ಕೆ ವ್ಯವಸ್ಥಿತವಾಗಿ ಮಾರಾಟ ಮಾಡಿ ಲಕ್ಷಾಂತರ ರೂ. ಸಂಪಾದನೆ ಮಾಡುತ್ತಿದ್ದ ಗ್ಯಾಂಗ್ ಇದಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ದಟ್ಟವಾದ ಅರಣ್ಯವಿದ್ದು, ಶ್ರೀಗಂಧ, ಸಾಗವಾನೆ ಮರಗಳು ಪ್ರಾಕೃತಿಕವಾಗಿ ಬೆಳೆದಿವೆ.