

ಚಾಮರಾಜನಗರ: ಪ್ರತಿಯೊಬ್ಬರು ಶ್ರೀಕೃಷ್ಣನ ಜಪ ಮಾಡುವುದರಿಂದ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದಾಗಿದೆ ಎಂದು ಮೈಸೂರಿನ ಇಸ್ಕಾನ್ ಸಂಸ್ಥೆಯ ಗುರುಗಳಾದ ಅಲರ್‌ನಾಥ್ ದಾಸ್‌ಪ್ರಭು ತಿಳಿಸಿದರು.
ತಾಲೂಕಿನ ಹರದನಹಳ್ಳಿ ಗ್ರಾಮದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಿರುವ ಶ್ರೀ ವಿದ್ಯಾಗಣಪತಿ ಮಂಡಳಿ ಹಾಗೂ ಶ್ರೀಕೃಷ್ಣ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ, ಗೋಪೂಜೆ, ಶ್ರೀರಾಧಾಕೃಷ್ಣ ವೇಷಧಾರ ಮೆರವಣಿಗೆ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಸಂಕೀರ್ತನೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಹರೇನಾಮ ಮತ್ತು ಹರೇ ಕೃಷ್ಣ ನಾಮಸ್ಮರಣೆ ಕಲಿಯುಗದ ಮಹಾಮಂತ್ರವಾಗಿದೆ. ನಾಮ ಜಪದಿಂದ ಮನಸ್ಸು ಶುದ್ದವಾಗಿ, ಸನ್ಮಾರ್ಗದಲ್ಲಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದು. ದೇವರ ನಾಮ ಸ್ಮರಣೆ ಕೆಟ್ಟ ಕಾರ್ಯಗಳನ್ನು ಮಾಡದಂತೆ ನಮ್ಮನ್ನು ಸರಿದಾರಿಗೆ ತರುತ್ತದೆ. ದೇವನಾಮ ಸ್ಮರಣೆಯಿಂದ ಪ್ರತಿಯೊಬ್ಬರು ಮನಸ್ಸನ್ನು ಸಂತೋಷವಾಗಿ ಇಟ್ಟುಕೊಳ್ಳಬಹುದು. ಪ್ರತಿ ಗ್ರಾಮಗಳಲ್ಲೂ ಯುವಶಕ್ತಿ ಆಧ್ಯಾತ್ಮಿಕ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ 2013 ರಿಂದಲೂ ಶ್ರೀ ಕೃಷ್ಣ ಜಯಂತಿ ಹಾಗೂ ಮೊಸರು ಮಡಿಕೆ ಉತ್ಸವ ನಡೆಯುತ್ತಿದೆ. ಯುವಶಕ್ತಿ ಆಧ್ಯಾತ್ಮಿಕದ ಭಾವದೊಂದಿಗೆ ಸನ್ಮಾರ್ಗದ ನಡೆ ಹಾಗೂ ಸಂಘಟನೆಯ ಶಕ್ತಿಯಾಗಿ ಬೆಳೆಯುತ್ತಿದೆ. ಶ್ರೀಕೃಷ್ಣ ಜಗತ್ತಿನ ವಿಸ್ಮಯಕಾರಿ ವ್ಯಕ್ತಿತ್ವ ಹೊಂದಿದ್ದು, ಆನಂದದ ಸ್ವರೂಪನಾಗಿದ್ದಾನೆ ಎಂದರು.
ಈ ವೇಳೆ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿಶೇಷ ಅಲಂಕಾರಗೊಂಡ ಗೋವಿನ ಮೆರವಣಿಗೆ ನಡೆಯಿತು. ಮಾರಿಗುಡಿ ಮುಂಭಾಗ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಮಕ್ಕಳು ಕುಡಿಕೆಯನ್ನು ಒಡೆಯುವ ಮೂಲಕ ಬೆಣ್ಣೆ ಮತ್ತು ಮೊಸರನ್ನು ತೆಗೆಯುವ ಸಂಭ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಪ್ರದೀಪ್ ಕುಮಾರ್ ದೀಕ್ಷಿತ್, ಪುರೋಹಿತ ಶ್ರೀಧರ್, ನಟರಾಜ್, ಸುರೇಶ್‌ನಾಗ್, ವಿದ್ಯಾಗಣಪತಿ ಮಂಡಳಿಯ ಮೋಹನ್ ಕುಮಾರ್, ವೆಂಕಟೇಶ್, ಕೆಂಪಣ್ಣ, ಮಂಜುನಾಥ್, ಶಂಕರ್, ಜಗದೀಶ್, ಪ್ರವೀಣ್, ಮಧು, ನವೀನ, ಶಶಿಕುಮಾರ್, ಗಿರೀಶ್ ಹಾಗೂ ಇತರರು ಹಾಜರಿದ್ದರು.