ಶ್ರೀಕೃಷ್ಣ ಬಲರಾಮ ರಥಯಾತ್ರೆ 11ರಂದು

h9-iskon
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ವತಿಯಿಂದ ಶ್ರೀಕೃಷ್ಣ ಬಲರಾಮ ರಥಯಾತ್ರೆ ಫೆ. 11ರಂದು ಸಂಜೆ 4.30ರಿಂದ ರಾತ್ರಿ 8.30ರವರೆಗೆ ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಹುಬ್ಬಳ್ಳಿ -ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರು ಮೈದಾನದಿಂದ ಯಾತ್ರೆ ಪ್ರಾರಂಭವಾಗಿ ಲ್ಯಾಮಿಂಗ್ಟನ್ ರಸ್ತೆ, ಅಂಬೇಡ್ಕರ್ ವೃತ್ತ, ಸ್ಟೇಷನ್ ರೋಡ್, ಗಣೇಶಪೇಟ ಚೌಕ್, ಮಿನಿ ವಿಧಾನಸೌಧ ಇತರೆಡೆ ಸಂಚರಿಸಿ, ನೆಹರು ಮೈದಾನದಲ್ಲಿ ಸಂಪನ್ನಗೊಳ್ಳಲಿದೆ ಎಂದರು.

ಅಲಂಕೃತಗೊಂಡ ಶ್ರೀ ಕೃಷ್ಣ ಬಲರಾಮರ ಮೂರ್ತಿಗಳು 40 ಅಡಿ ಎತ್ತರದ ರಥದಲ್ಲಿ ಆಸೀನಗೊಳ್ಳಲಿವೆ. ದಾರಿಯುದ್ದಕ್ಕೂ ಭಜನೆ, ಕೀರ್ತನೆ ಜರುಗಲಿದೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸಿ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಾರ್ವಜನಿಕರು ಆಗಮಿಸಿ ರಥವನ್ನು ಎಳೆಯಬಹುದು. ನಿಗದಿತ ಸ್ಥಳದಲ್ಲಿ ರಥವು ಕೆಲ ಹೊತ್ತು ನಿಲ್ಲಲಿದ್ದು, ಹೂವು, ಟೆಂಗಿನಕಾಯಿ, ಹಣ್ಣುಗಳನ್ನು ಸಮರ್ಪಿಸಬಹುದು. ಮನೆ, ಅಂಗಡಿಗಳ ಮುಂದಿನ ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಬಹುದು ಎಂದು ವಿವರಿಸಿದರು.

ಉಪಾಧ್ಯಕ್ಷ ರಘೊತ್ತಮ ದಾಸ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net