

ಮೈಸೂರು: ಕನಕದಾಸರು ಭಕ್ತಿ-ಶ್ರದ್ಧೆಯಿಂದ ಶ್ರೀಕೃಷ್ಣ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದಕ್ಷತೆ, ಪ್ರಾಮಾಣಿಕತೆ ಆಡಳಿತದ ಮೂಲಕ ದೇಶವೇ ನೋಡುವಂತೆ ಮಾಡಿದ್ದಾರೆ ಎಂದು ಶಾಸಕ ಕೆ.ಹರೀಶ್ಗೌಡ ಹೊಗಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಕನಕದಾಸರ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಂತಕವಿ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಕೃಷ್ಣ ದೇವರನ್ನು ನಮ್ಮ ಕಡೆ ತಿರುಗಿ ನೋಡುವಂತೆ ಮಾಡಿದ್ದು, ಕನಕದಾಸರ ಭಕ್ತಿ-ಶ್ರದ್ಧೆಗೆ ಸಾಕ್ಷಿ. ಈಗಲೂ ಉಡುಪಿಯಲ್ಲಿ ಕನಕನ ಕಿಂಡಿ ಇದೆ. ಕಂದಾಚಾರ ನಿರ್ಮೂಲನೆಗೆ ಪ್ರಯತ್ನಿಸಿದ ಅವರ ಕೀರ್ತನೆಗಳು ಈಗಲೂ ಪ್ರಸ್ತುತ. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ವಚನದ ಸಾರಾಂಶ ಈಗಲೂ ಸರ್ವಕಾಲಿಕ ಸತ್ಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕುಲ-ಜಾತಿ ನೋಡದೆ ಸಮಸಮಾಜ ನಿರ್ಮಾಣಕ್ಕೆ ಜನಪರ ಕಾರ್ಯಕ್ರಮ ಕೊಟ್ಟಿದ್ದಾರೆ. ಇದರಿಂದಾಗಿ ಎಲ್ಲ ಸಮುದಾಯದವರಿಗೂ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರದ್ದು, ದಕ್ಷತೆ ಮತ್ತು ಪ್ರಾಮಾಣಿಕತೆ ರಾಜಕೀಯ ಜೀವನ. ಅದೇ ತತ್ವ ಆಧಾರದ ಮೇಲೆ ಆಡಳಿತ ನೀಡಿದ್ದಾರೆ. ದಾಸರಲ್ಲಿ ಕನಕದಾಸರು ಶ್ರೇಷ್ಠರು. ರಾಜಕೀಯದಲ್ಲಿ ಸಿದ್ದರಾಮಯ್ಯ ಶ್ರೇಷ್ಠ ರಾಜಕಾರಣಿ ಎಂದು ಬಣ್ಣಿಸಿದರು.
45 ವರ್ಷದ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಎಂದೂ ಭ್ರಷ್ಟಾಚಾರಕ್ಕೆ ಕೈ ಹಾಕಿಲ್ಲ. ಇದು ರಾಜ್ಯ ಜನರಿಗೂ ಗೊತ್ತು. ಆದರೆ, ಆರೋಪ ಮಾಡಬೇಕೆಂದು ಆರೋಪಿಸುತ್ತಿದ್ದಾರೆ. ಮುಡಾ ಸದಸ್ಯನಾಗಿ ಸಭೆಯ ಎಲ್ಲ ನಡಾವಳಿಯನ್ನೂ ನೋಡಿರುವೆ. ಒಂದೇ ಒಂದು ಕಡತದಲ್ಲಿ ಸಿದ್ದರಾಮಯ್ಯ ಹೆಸರು, ಅವರ ಚುಕ್ಕೆ ಸಹ ಎಲ್ಲೂ ಇಲ್ಲ. ಆದಾಗ್ಯೂ, ಅವರ ವ್ಯಕ್ತಿತ್ವವನ್ನು ಹಾಳು ಮಾಡಲು ಹುನ್ನಾರ ನಡೆದಿದೆ ಎಂದು ದೂರಿದರು.
ತಪ್ಪು ಮಾಡದಿದ್ದರೂ ಅವರನ್ನು ತಪ್ಪಿನೊಳಗೆ ಸಿಲುಕಿಸಲು ಷಡ್ಯಂತ್ರ ನಡೆದಿದೆ. ಈ ಕೃತ್ಯದ ಹಿಂದಿರುವ ವ್ಯಕ್ತಿಗಳೇ ಮುಂದಿನ ದಿನಗಳಲ್ಲಿ ಸಿಲುಕಿಕೊಳ್ಳುವುದು ನಿಶ್ಚಿತ ಎಂದರು.
ಸಿಎಂಗೆ ದುಷ್ಟಶಕ್ತಿಗಳಿಂದ ತೊಂದರೆಯಾಗಿದೆ. ನುಡಿದಂತೆ ನಡೆದ ಅವರು ಪಂಚ ಗ್ಯಾರಂಟಿ ಯೋಜನೆ ನೀಡಿ ಮಾದರಿಯಾಗಿದೆ. ಕನಕರ ಮತ್ತು ಸಿದ್ದರಾಮಯ್ಯ ಅವರ ಕೊಡುಗೆ ಸೂರ್ಯ ಚಂದ್ರ ಇರುವ ತನಕ ಶಾಶ್ವತ. ಅವರು ಮುಂದಿನ 5 ವರ್ಷ ಕೆಲಸ ಮಾಡಲು ಶಕ್ತಿ ನೀಡುವಂತೆ ಕನಕರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಮುಡಾ ಹಗರಣದಲ್ಲಿ ತಪ್ಪಿಲ್ಲದಿದ್ದರೂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳು, ರೈತರಿಗೆ ಅನುಕೂಲ ಮಾಡಿದರು. ಸಿದ್ದರಾಮಯ್ಯ ಅವರು ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆ ಕೊಟ್ಟಿದ್ದಾರೆ. ಅವರು ಬಡತನ ನಿವಾರಣೆ, ಸಮಾನತೆ ತರಲು ಕನಕ, ಬಸವಣ್ಣ, ಅಂಬೇಡ್ಕರ್ ಬರೆದ ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.
ಕನಕರು ನಿಮ್ಮ ಕುಲದ ನೆಲೆ ಯಾವುದು ಎಂದು ಪ್ರಶ್ನಿಸಿದರು. ಆದರೆ, ಈಗಲೂ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಜಾತೀಯತೆ, ತಾರತಮ್ಯ ನಿವಾರಣೆ ಮಾಡಲು ಇನ್ನು ಎಷ್ಟು ಮಹನೀಯರು ಹುಟ್ಟಿ ಬರಬೇಕು ಎಂದು ಕಳವಳ ವ್ಯಕ್ತಪಡಿಸಿದರು.
ಕನಕರು ಸಮಾಜದ ಅಂಕು-ಡೊಂಕು ತಿದ್ದಲು ಯತ್ನಿಸಿದರು. ಅನ್ಯಾಯದ ವಿರುದ್ಧ ಬಂಡೆದ್ದರು. ವೈಜ್ಞಾನಿಕ ಚಿಂತನೆ ಬೆಳೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ರಾಮಧಾನ್ಯ ಚರಿತ್ರೆಯಲ್ಲಿ ಮೇಲು-ಕೀಳು ಹುರುಳಿಲ್ಲ. ನೀರು, ಗಾಳಿ, ಬೆಂಕಿಗೆ ಯಾವ ಕುಲ ಇದೆ ಎಂದು ಪ್ರಶ್ನಿಸಿದ್ದಾರೆ. ಬೇಡ ರಾಮಾಯಣ ಬರೆದರು. ಬೆಸ್ತ ಮಹಾಭಾರತ ಬರೆದರು. ಕನಕರು ಮೌಢ್ಯದ ವಿರುದ್ಧ ಸಮರ ಸಾರಿದರು. ಪ್ರತಿಭೆಗೆ ಜಾತಿಯ ಹಂಗಿಲ್ಲ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಉಪನ್ಯಾಸ ನೀಡಿದರು. ಕಾಗಿನೆಲೆ ಕನಕಗುರು ಪೀಠದ ಮೈಸೂರು ಶಾಖೆಯ ಶ್ರೀ ಶಿವಾನಂದಪುರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂಎಲ್ಸಿಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಇತರರಿದ್ದರು.
ಸಿಎಂ ಪರ ಸ್ಪಷ್ಟನೆ ಕೊಟ್ಟ ಗಣ್ಯರು
ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳಲು ಇಡೀ ಕಾರ್ಯಕ್ರಮ ಮೀಸಲಾಯಿತು. ಕನಕರ ಕೊಡುಗೆ ಪ್ರಸ್ತಾಪಿಸಿದ ಗಣ್ಯರು, ಸಿಎಂ ವಿರುದ್ಧ ಎದುರಾಗಿರುವ ಮುಡಾ ಪ್ರಕರಣದ ಕುರಿತು ಸ್ಪಷ್ಟನೆ ಕೊಟ್ಟರು. ಭಾಷಣ ಮಾಡಿದ ಶಾಸಕ ಕೆ.ಹರೀಶ್ಗೌಡ, ಎಂಎಲ್ಸಿ ಡಾ.ಡಿ.ತಿಮ್ಮಯ್ಯ ಮತ್ತು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸಿಎಂ ಕುರಿತು ಹೆಚ್ಚು ಮಾತನಾಡಿ, ಅವರ ಕೊಡುಗೆಗಳನ್ನು ಪ್ರಸ್ತಾಪಿಸಿದರು. ರಾಜಕೀಯ ವಿಷಯವೇ ಹೆಚ್ಚು ಮಾರ್ದನಿಸಿತು.
ಮೆರವಣಿಗೆ ಮೆರುಗು
ಜಯಂತಿ ಅಂಗವಾಗಿ ಮೆರವಣಿಗೆ ಸಡಗರದಿಂದ ನಡೆಯಿತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕನಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು.
ಡೊಳ್ಳುಕುಣಿತ, ಕಂಸಾಳೆ, ಗೊರವರ ಕುಣಿತ, ಪಟ ಕುಣಿತ, ಕೊಡಗಿನ ನೃತ್ಯ, ಬೀಸುಕಂಸಾಳೆ, ಜೇನುಕುರುಬರ ನೃತ್ಯ, ನಗಾರಿ ಸೇರಿದಂತೆ ಅಂದಾಜು 20 ಜಾನಪದ ಕಲಾ ತಂಡಗಳ ಕಲಾವಿದರು ನೃತ್ಯ ಪ್ರದರ್ಶಿಸಿ ನೋಡುಗರನ್ನು ಆಕರ್ಷಿಸಿದರು. ಗ್ಯಾರಂಟಿ ಯೋಜನೆಗಳ ಪರಿಚಯಿಸುವ ಸ್ತಬ್ಧಚಿತ್ರಗಳ ಗಮನ ಸೆಳೆದವು.