ಶ್ರೀಕಿತ್ತೂರಮ್ಮನ ಬಂಡಿ ಹಬ್ಬ

14BTP01
Published on


ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಿತ್ತೂರು ಗ್ರಾಮದಲ್ಲಿ ಜೂ.16ರಂದು ಶ್ರೀ ಕಿತ್ತೂರಮ್ಮನ ಬಂಡಿ ಹಬ್ಬ ನಡೆಯಲಿದ್ದು, ಹಬ್ಬಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

14 ವರ್ಷಗಳ ಬಳಿಕ ಕಿತ್ತೂರು ಸೇರಿದಂತೆ ಈ ವ್ಯಾಪ್ತಿಯ ಹದಿನೆಂಟು ಕೊಪ್ಪಲು ಗ್ರಾಮಗಳ ಗ್ರಾಮಸ್ಥರು ಮತ್ತು ಭಕ್ತಾದಿಗಳು ಒಟ್ಟಾಗಿ ಸೇರಿ ಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಶುಕ್ರವಾರ ಸಂಜೆ ಶ್ರೀ ಕಿತ್ತೂರಮ್ಮನ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ಸಂಪ್ರದಾಯಂತೆ ಗ್ರಾಮದ ಕುರ್ಜುನ ಬಳಿಗೆ ತರಲಾಗುತ್ತದೆ. ಈ ವೇಳೆ ವಿಶೇಷ ಪೂಜಾ ಕೈಕಂರ್ಯಗಳು ನಡೆಯಲಿವೆ. ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ಬಂಡಿ(ಸಣ್ಣ ತೇರು)ಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಂಡಿ ಉತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಾಗಲಿದ್ದು, ಶನಿವಾರ ಮುಂಜಾನೆವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಕೊನೆಯಲ್ಲಿ ದೇವಸ್ಥಾನದ ಬಳಿಗೆ ಬಂಡಿ ಸಾಗಲಿದೆ. ಈ ವೇಳೆ ಗ್ರಾಮದ ಕಲ್ಯಾಣ ಸೇರಿದಂತೆ ವಿವಿಧ ಇಷ್ಟಾರ್ಥ ಈಡೇರಿಸುವಂತೆ ದೇವಿಗೆ ಹರಕೆ ಮಾಡಿಕೊಂಡವರು ಹರಕೆ ತೀರಿಸಲಿದ್ದಾರೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಿತ್ತೂರು ಗ್ರಾಮವು ತನ್ನ ವಿಶಿಷ್ಟ ಆಚರಣೆಗಳಿಂದಲೇ ಸ್ಥಳೀಯವಾಗಿ ಮಹತ್ವ ಗಳಿಸಿಕೊಂಡಿದೆ. ಅಂತಹ ವಿಶಿಷ್ಟ ಆಚರಣೆಗಳಲ್ಲಿ ಶ್ರೀ ಕಿತ್ತೂರಮ್ಮನ ಬಂಡಿ ಹಬ್ಬವೂ ಒಂದು. ಹಿಂದಿನಿಂದಲೂ ಈ ಹಬ್ಬವು ಹತ್ತರಿಂದ-ಹದಿನೈದು ವರ್ಷಗಳ ಅವಧಿಯಲ್ಲಿ ಒಮ್ಮೆ ಮಾತ್ರ ಆಚರಿಸಲಾಗುತ್ತದೆ. 2009ರಲ್ಲಿ ಆಚರಣೆ ಮಾಡಿದ ಬಳಿಕ ಈ ವರ್ಷ ನಡೆಯುತ್ತಿದೆ. ಮುಂಗಾರು ಬಿತ್ತನೆ ಕಾರ್ಯ ಅಂತ್ಯಗೊಳ್ಳುವ ಜೂನ್, ಜುಲೈನಲ್ಲಿ ಆಚರಿಸಲಾಗುತ್ತದೆ.

ಬಂಡಿ ಉತ್ಸವವು ಜೂನ್‌ನಲ್ಲಿ ಮಾದೇಶ್ವರನ ಪರ ಆಚರಣೆ, ಹೊಸಬಾವಿ ತೋಡಿ ಕಳಸ ಪೂಜೆ ಮತ್ತು ಅನ್ನದಾನ, ಹನುಮ ಗುಡಿಗೆ 9 ಮಾದರಿ ಹರಿಸೇವೆ, ಹನುಮನ ಪರ ಹೀಗೆ ಹಲವು ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಜೂ.16ರ ಶುಕ್ರವಾರ ಬಂಡಿ ಉತ್ಸವ ನಡೆಯಲಿದೆ. ದೇವಿಯ ಬಂಡಿಯೊಂದಿಗೆ ಕಿತ್ತೂರಿನ ವ್ಯಾಪ್ತಿಯ 18 ಕೊಪ್ಪಲುಗಳ ಮಹಿಳೆಯರು ತಂಬಿಟ್ಟಿನ ದೀಪದೊಟ್ಟಿಗೆ ಸಾಗುತ್ತಾರೆ. ಹಬ್ಬದ ದಿನ ದೇವಾಲಯದ ಬಳಿ ಭಕ್ತರ ಸಮ್ಮುಖದಲ್ಲಿ ಜರುಗುವ ಪೂಜಾ ಕೈಂಕರ್ಯ ಹಾಗೂ ಕೆಂಡೋತ್ಸವ ಆಚರಣೆ ಪ್ರಮುಖ ಆಕರ್ಷಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net