

ನಂಜನಗೂಡು: ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ 1.68 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.
ದೇವಾಲಯದ ದಾಸೋಹ ಭವನದಲ್ಲಿ ದೇಗುಲದ ಒಟ್ಟು 34 ಹುಂಡಿಗಳನ್ನು ತೆರೆದು ಎಣಿಸಲಾಯಿತು. ಹುಂಡಿಯಲ್ಲಿ ಒಟ್ಟು 1,68,75,992 ರೂ. ನಗದು, 88 ಗ್ರಾಂ ಚಿನ್ನ, 4.45 ಕೆಜಿ ಬೆಳ್ಳಿ ಹಾಗೂ 67 ವಿದೇಶಿ ಡಾಲರ್ ದೊರೆತಿವೆ. ಇದು ಒಂದು ತಿಂಗಳ ಅವಧಿಯಲ್ಲಿ ದೊರೆತ ಕಾಣಿಕೆಯಾಗಿದೆ.
ಬ್ಯಾಂಕ್ ಅಫ್ ಬರೋಡ ಹಾಗೂ ದೇವಾಲಯದ ಸಿಬ್ಬಂದಿ, ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಎಣಿಕಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ ಆರಂಭಗೊಂಡು ರಾತ್ರಿಯವರೆಗೂ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ನಡೆಯಿತು.
ಮುಜರಾಯಿ ತಹಸೀಲ್ದಾರ್ ವಿದ್ಯಾಲತಾ, ದೇವಾಲಯದ ಇಒ ಜಗದೀಶ್ ಕುಮಾರ್, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಬ್ಯಾಂಕ್ ಅಫ್ ಬರೋಡ ವ್ಯವಸ್ಥಾಪಕ ಟಿ.ಕೆ.ನಾಯಕ್ ಇದ್ದರು.