ಶ್ರೀಕಂಠೇಶ್ವರ ದೇಗುಲಕ್ಕೆ ಗಣೇಶ್ ಪ್ರಸಾದ್ ಭೇಟಿ

18-GPT-2
Published on

ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ನಂತದ ಎಚ್.ಎಂ.ಗಣೇಶ್ ಪ್ರಸಾದ್ ಕುಟುಂಬದ ಸದಸ್ಯರು ಹಾಗೂ ಪಕ್ಷದ ಮುಖಂಡರೊಂದಿಗೆ ಬುಧವಾರ ತಮ್ಮ ತಾಯಿ ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಜತೆಗೂಡಿ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದಿದ್ದರು. ಗುರುವಾರ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರ ಜತೆಗೂಡಿ ನಂಜನಗೂಡಿಗೆ ತೆರಳಿ ನಂಜುಂಡೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ಗಣೇಶ್ ಪ್ರಸಾದ್ ಪತ್ನಿ ವಿದ್ಯಾ ಗಣೇಶ್, ಪುತ್ರ ಇಷ್ಟಾರ್ಥ ಪ್ರಸಾದ್, ಚಿಕ್ಕಮ್ಮ ರೂಪಾ, ಮುಖಂಡರಾದ ಜಿ.ಕೆ.ಲೋಕೇಶ್, ಚಂದನ್ ಇತರರಿದ್ದರು.


ಸಚಿವ ಸ್ಥಾನ ನೀಡಲು ಆಗ್ರಹ: ನೂತನ ಸಂಪುಟದಲ್ಲಿ ಗಣೇಶ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ಕೊಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಮಹದೇವಪ್ರಸಾದ್ ಸಚಿವರಾಗಿದ್ದಾಗ ಗುಂಡ್ಲುಪೇಟೆಯ ಅಭಿವೃದ್ಧಿಗೆ ಶ್ರಮಿಸಿದ್ದರು. 2017ರಲ್ಲಿ ನಿಧನರಾದ ನಂತರ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ಡಾ.ಗೀತಾ ಮಹದೇವಪ್ರಸಾದ್ ಅವರನ್ನು ಸಚಿವೆಯನ್ನಾಗಿಸಿ ದೊಡ್ಡ ಮಟ್ಟದ ಅನುದಾನ ನೀಡಿದ್ದರಿಂದ ಒಂದೂವರೆ ವರ್ಷದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿತ್ತು. ಆದರೆ ಕಳೆದ 5 ವರ್ಷಗಳಿಂದ ಯಾವುದೇ ಅಭಿವೃದ್ಧಿಯೂ ಆಗುತ್ತಿಲ್ಲ. ಇಡೀ ಮೈಸೂರು ಭಾಗದಲ್ಲಿ ಏಕೈಕ ವೀರಶೈವ ಶಾಸಕರಾಗಿ ಮೊದಲ ಬಾರಿಗೆ ಅತಿ ಹೆಚ್ಚು ಬಹುಮತಗಳಿಂದ ಆಯ್ಕೆಯಾಗಿರುವ ಗಣೇಶ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖಂಡ ಶಿವಪುರ ಮಂಜಪ್ಪ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net