

ಕಡೂರು: ಮಲ್ಲೇಶ್ವರ ಗ್ರಾಮದ ಶ್ರೀ ಸ್ವರ್ಣಾಂಬಾ ದೇವಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಸ್ವರ್ಣಾಂಬಾ ದೇವಿಯ ಮೂಲಸ್ಥಾನದಲ್ಲಿ ಪೂಜೆ ನಡೆದ ನಂತರ ದೇವಿಗೆ ಗಜಾರೋಹಣೋತ್ಸವ ನಡೆಯಿತು. ಕನ್ಯಕಾ ಪೂಜೆ,ಪುರಸ್ಸರ ಕಲ್ಯಾಣ ಮಂಟಪ ನೆರವೇರಿಸಿದ ನಂತರ ಉತ್ಸವಮೂರ್ತಿಯ ಜತೆ ಅರಳೀಮರದಮ್ಮ ಹಾಗೂ ಚೌಡ್ಲಾಪುರ ಕರಿಯಮ್ಮ ದೇವಿ ಉತ್ಸವಮೂರ್ತಿಗಳನ್ನು ಮೆರವಣಿಗೆಯಲ್ಲಿ ಭಕ್ತರ ಮುಂದೆ ಮೂರು ಸುತ್ತು ತರಲಾಯಿತು. ಈ ಸಂದರ್ಭದಲ್ಲಿ ಮುತ್ತೈದೆಯರು ದೇವಿಗೆ ಅರಿಶಿಣ-ಕುಂಕುಮ ಸಮರ್ಪಿಸಿದರು. ದೇವರನ್ನು ಹೊತ್ತ ಭಕ್ತರು ಅರಿಶಿಣದಲ್ಲಿ ತೋಯ್ದುಹೋಗಿದ್ದರು. ರಥಪೂಜೆ ನೆರವೇರಿಸಿ ಸ್ವರ್ಣಾಂಬಾ ದೇವಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಲಿಪ್ರದಾನ ನಡೆದ ಕೂಡಲೇ ಭಕ್ತರು ರಥ ಎಳೆದು ಸಂಭ್ರಮಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಕೆ.ಎಸ್.ಆನಂದ್ ವಿಶೇಷ ಪೂಜೆ ಸಲ್ಲಿಸಿದರು. ಪೊಲೀಸ್ ಇನ್ಸ್‌ಪೆಕ್ಟರ್ ರಫೀಕ್, ಪಿಎಸ್‌ಐಗಳಾದ ಧನಂಜಯ ಮತ್ತು ಲೀಲಾವತಿ ಬಂದೋಬಸ್ತ್ ಕಲ್ಪಿಸಿದ್ದರು. ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ. ಎಂ.ಟಿ.ಸತ್ಯನಾರಾಯಣ ಮತ್ತು ಸದಸ್ಯರು ಇದ್ದರು.