

ಸೇಡಂ: ಈಗಾಗಲೇ ಘಟಕ ಆರಂಭಿಸಿರುವ ಶ್ರೀ ಸಿಮೆಂಟ್ನ ಆಡಳಿತ ಮಂಡಳಿ ಸ್ಥಳೀಯರ ಮೇಲೆ ತುಘಲಕ್ ದರ್ಬಾರ್ ನಡೆಸುತ್ತಿದೆ. ಇನ್ನೊಂದು ಘಟಕ ಸ್ಥಾಪಿಸಿ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಲು ಬಿಡುವುದಿಲ್ಲ. ಹಾಗೇನಾದ್ರು ಮಾಡದುರ ಅಂದರ್ ನಮ್ಮ ಹೆಣದ ಮ್ಯಾಲ ನಡಿತಾರೀ ಸಾಹೇಬ್ರ…
ಕೋಡ್ಲಾ-ಬೆನಕನಹಳ್ಳಿ ಮಧ್ಯದ ಶ್ರೀ ಸಿಮೆಂಟ್ ಕಂಪನಿ ತನ್ನ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ಮಾಲಿನ್ಯ ನಿಯಂತ್ರಣ ಮಂಡಳಿ ಕರೆದಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ರೈತರು, ಜನಪ್ರತಿನಿಧಿಗಳಿಂದ ಕೇಳಿಬಂದ ಆಕ್ರೋಶದ ಮಾತುಗಳಿವು.
ಐದು ವರ್ಷದ ಹಿಂದೆ ಬಣ್ಣದ ಮಾತುಗಳನ್ನಾಡಿ ಜಮೀನು ಪಡೆದಿರುವ ಕಂಪನಿ ಅಧಿಕಾರಿಗಳು, ನೌಕರಿ ಕೊಡುವ ವಾಗ್ದಾನವೂ ಪೂರ್ಣಪ್ರಮಾಣದಲ್ಲಿ ಈಡೇರಿಸಿಲ್ಲ. ನಮ್ಮೂರುಗಳಲ್ಲಿ ಧೂಳು ತುಂಬಿ ತುಳುಕುವಂತೆ ಮಾಡಿದ್ದಾರೆ. ಕುಡಿಯುವ ನೀರು ಪೂರೈಕೆ, ಆಸ್ಪತ್ರೆ, ಶಾಲೆ ಏನೆಲ್ಲ ಸೌಲಭ್ಯ ಕಲ್ಪಿಸುವ ಮಾತುಗಳು ಕಾಗದದಲ್ಲೇ ಉಳಿದಿವೆ. ಹೀಗಾಗಿ ಯಾವ ಕಾರಣಕ್ಕೂ ಮತ್ತೊಂದು ಘಟಕ ಆರಂಭಿಸಲು ಬಿಡೆವು. ಹಾಗೇನಾದರು ಮಾಡಿದರೆ ನಮ್ಮ ಹೆಣದ ಮೇಲೆ ನಿಮರ್ಾಣ ಮಾಡಲಿ ಎಂದು ಬೆನಕನಹಳ್ಳಿ ರೈತ ನೋವಿನ ಜತೆ ಕಿಡಿಕಾರಿದರು.
ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಯಶವಂತ ಗುರುಕರ್, ನಾನು ಎಲ್ಲೋ ಕುಳಿತು ಯಾರದ್ದೋ ಮಾತು ಕೇಳಿ ಹೋಗಲ್ಲ. ನಿಮ್ಮ ಕಷ್ಟ-ಸುಖ ಆಲಿಸಲು ಬಂದಿದ್ದೇನೆ. ದುಡಿಯುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲೇಬೇಕು. ಇದಕ್ಕಾಗಿ ಸಂಪೂರ್ಣ ದಾಖಲೆ ಪರಿಶೀಲನೆ ಮಾಡುತ್ತೇನೆ. ಸಿಎಸ್ಆರ್ಗೆ ನಾನೇ ಮೇಲುಸ್ತುವಾರಿ ಆಗಿದ್ದರಿಂದ ಯಾವ ಕೆಲಸ ಆಗಬೇಕು ಎಂಬುದನ್ನು ನನ್ನ ಗಮನಕ್ಕೆ ತನ್ನಿ. ನಾನು ಕ್ರಮ ಕೈಗೊಳ್ಳುತ್ತೇನೆ. ರೈತರು ಮಧ್ಯವರ್ತಿಗಳ ಕೈಗೊಂಬೆಯಾಗದೆ ನೇರವಾಗಿ ವ್ಯವಹರಿಸುವುದನ್ನು ಕಲಿತು ಪ್ರಜ್ಞಾವಂತಿಕೆ ಮೆರೆಯಬೇಕು. ಈಗಾಗಲೇ ನೀಡಿದ ಜಾಬ್ ಕಾರ್ಡ ಮರಳಿ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿಗೆ ಎಚ್ಚರಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ್, ಬೆನಕನಹಳ್ಳಿಯ ಮುಖಂಡ ಬಸವರಾಜ ಪಾಟೀಲ್, ಕಾಂಗ್ರೆಸ್ ಮುಖಂಡ ಸತೀಶರೆಡ್ಡಿ ರಂಜೋಳ ಮಾತನಾಡಿದರು.
ಸಹಾಯಕ ಆಯುಕ್ತೆ ಸುರೇಖಾ ಕಿಣಗಿ, ಬೆಂಗಳೂರಿನ ಹಿರಿಯ ಪರಿಸರ ಅಧಿಕಾರಿ ಮಧುಸೂದನ, ಕಲಬುರಗಿಯ ಪರಿಸರ ಅಧಿಕಾರಿ ಮಂಜಪ್ಪ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಆರೋಗ್ಯಾಧಿಕಾರಿ ಡಾ.ಸುರೇಶ ಮೇಕಿನ್ ಜತೆಗೆ ಸುತ್ತಮುತ್ತಲಿನ ಗ್ರಾಮದ ರೈತರು ಹಾಗೂ ವಿವಿಧ ಪಕ್ಷದ ಪ್ರಮುಖರು ಭಾಗವಹಿಸಿದ್ದರು.
ಕೈಕೈ ಮಿಲಾಯಿಸುವ ಹಂತಕ್ಕೆ: ಸಭೆಯಲ್ಲಿ ಕೆಲ ರೈತರು ಕಾಖರ್ಾನೆ ನಡೆಯನ್ನು ವಿರೋಧಿಸಿ ಮಾತನಾಡಿದರೆ, ಕೆಲವರು ಪರವಾಗಿ ಅನಿಸಿಕೆ ಹಂಚಿಕೊಂಡರು. ಹೀಗೆ ಒಬ್ಬರ ನಂತರ ಮತ್ತೊಬ್ಬರು ಮಾತನಾಡುವಾಗ ಇನ್ನೊಬ್ಬರು ಅಡ್ಡಿಪಡಿಸುವುದು, ಚೀರಾಟ ನಡೆದಾಗ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ಬಂದು ತಲುಪಿತ್ತು. ಆದರೆ ಪೊಲೀಸರ ಮಧ್ಯಸ್ಥಿಕೆಯಿಂದ ಸಭೆ ಸುಸೂತ್ರವಾಗಿ ಜರುಗಿತು.
ಕಂಪನಿ ಆರಂಭಕ್ಕೂ ಮುನ್ನ ನೀಡಿದ ಭರವಸೆಗಳನ್ನೇ ಆಡಳಿತ ಮಂಡಳಿ ಈಡೇರಿಸಿಲ್ಲ. ಹಾಗಂದ ಮೇಲೆ ಹೊಸ ಪ್ಲಾಂಟ್ ಆರಂಭ ಸಂಬಂಧ ಸಭೆ ನಡೆಸಿರುವುದು ಅರ್ಥವಿಲ್ಲ. ಮೊದಲು ಈ ಭಾಗದ ಜನರ (ರೈತರ) ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು.
| ಡಾ.ಶರಣಪ್ರಕಾಶ ಪಾಟೀಲ್ ಮಾಜಿ ಸಚಿವ
ಶ್ರೀ ಸಿಮೆಂಟ್ನವರ ಮಾನಸಿಕ ಹಿಂಸೆಯಿಂದ ರೈತರು ಹೈರಾಣಾಗಿದ್ದಾರೆ. ಏನಾದರೂ ಕೇಳಲು ಹೋದರೆ ಕೇಸ್ ದಾಖಲಿಸಲು ಮುಂದಾಗುತ್ತಾರೆ. ಜಮೀನು ನೀಡಿದ ರೈತನ ಕುಟುಂಬಕ್ಕೆ ನೌಕರಿ ನೀಡುವ ಮಾತು ಭರವಸೆಯಾಗಿಯೇ ಉಳಿದಿದೆ. ಕಡ್ಡಾಯವಾಗಿ ಕುಟುಂಬಕೊಂದು ನೌಕರಿ ನೀಡಿ. ನಂತರ ಇನ್ನೊಂದು ಘಟಕ ಆರಂಭದ ಬಗ್ಗೆ ಚರ್ಚಿಸೋಣ
| ಮುಕ್ರಂಖಾನ್ ಕಾಂಗ್ರೆಸ್ ಮುಖಂಡ
ಸೇಡಂ ತಾಲೂಕಿನ ಅನೇಕ ಕಂಪನಿಗಳಿಗಿಂತಲೂ ಈ ಶ್ರೀ ಸಿಮೆಂಟ್ ವಿಭಿನ್ನವಾಗಿದೆ. ಇಲ್ಲಿ ಸ್ಥಳೀಯರ ಬಗ್ಗೆ ಅಸೂಯೆ, ಮಲತಾಯಿ ಧೋರಣೆ ಅನುರಿಸಲಾಗುತ್ತಿದೆ. ಕಾರ್ಮಿಕರನ್ನು 12 ಗಂಟೆ ದುಡಿಸಿಕೊಳ್ಳುವಂತಹ ದಬ್ಬಾಳಿಕೆ ಆಡಳಿತ ನಡೆಯುತ್ತಿದ್ದು, ತಕ್ಷಣ ನಿಲ್ಲಬೇಕು. ಈ ವಿಷಯದಲ್ಲಿ ಜಿಲ್ಲಾಡಳಿತ ಸಹ ನಿಗಾ ಇರಿಸಬೇಕು.
| ಬಾಲರಾಜ್ ಗುತ್ತೇದಾರ್ ಜೆಡಿಎಸ್ ಮುಖಂಡ