ಶ್ರೀ ಸಿದ್ಧರಬೆಟ್ಟದಲ್ಲಿ ಜಾತ್ರಾ ಮಹೋತ್ಸವ

2
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ

ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಶ್ರೀ ನಿಜಗಲ್ಲು ಸಿದ್ಧರಬೆಟ್ಟದಲ್ಲಿ ಡಿ.12, 13ರಂದು ದೇವಾಲಯ ಸೇವಾ ಸಮಿತಿಯಿಂದ ಶ್ರೀಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಹನುಮ ಜಯಂತಿ ನಡೆಯಲಿದೆ.

ಡಿ.12ರ ಸಂಜೆ ಶ್ರೀ ಗಣೇಶ ದೇವಸ್ಥಾನದ ವಾರ್ಷಿಕೋತ್ಸವ, ಗಂಗಾ ಸಂಗ್ರಹಣ, ಗಣಪತಿ ಪೂಜೆ, ಪುಣ್ಯಾಹ, ಗಣ ಹೋಮ, ನವಗ್ರಹ ಆರಾಧನೆ, ಪೂರ್ಣಾಹುತಿ, ಮಂಗಳಾರತಿ ಇರಲಿದೆ.

ಮಧ್ಯಾಹ್ನ 2ಕ್ಕೆ ಶ್ರೀ ಸಿದ್ದೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ ಸಿ.ಎಸ್.ವಸಂತಕುಮಾರ್ ನಿರ್ದೇಶನದಲ್ಲಿ ನಲ್ಲತಂಗಾ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ಪ್ರದರ್ಶನವಿರಲಿದೆ.

13ರಂದು ಶ್ರೀ ಗದ್ದುಗೆ ಮಾರಮ್ಮನ ಪೂಜೆ, ಶ್ರೀ ವಿನಾಯಕ, ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಲಕ್ಷೀನರಸೀಂಹಸ್ವಾಮಿ, ಶ್ರೀ ಕೋಟೆ ಆಂಜನೇಯಸ್ವಾಮಿ, ಶ್ರೀ ಮಲ್ಲಿಕಾರ್ಜುನಸ್ವಾಮಿ ಗುಹೆಯ ಪಾರ್ವತಿ ಪರಮೇಶ್ವರ, ಶ್ರೀ ಸುಬ್ರಹ್ಮಣ್ಯ, ಶ್ರೀನಾಗಕನ್ಯೆ, ಶ್ರೀ ಗಾಯತ್ರಿದೇವಿ, ಶ್ರೀ ಕಾಲಬೈರವೇಶ್ವರಸ್ವಾಮಿ ಮತ್ತು ಶ್ರೀ ವೀರಭದ್ರಸ್ವಾಮಿಗೆ ಅಭಿಷೇಕ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ಶ್ರೀ ಸಿದ್ದೇಶ್ವರ ಸ್ವಾಮಿಯ ಉತ್ಸವಮೂರ್ತಿ ಮೆರವಣಿಗೆ, 1ಕ್ಕೆ ಶ್ರೀ ರಾಮಾಂಜನೇಯ ಕೃಪಾಪೋಷಿತ ನಾಟಕ ಮಂಡಳಿಯಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಇರುತ್ತದೆ ಎಂದು ಶ್ರೀ ನಿಜಗಲ್ಲು ಸಿದ್ದರಬೆಟ್ಟ ದೇವಸ್ಥಾನಗಳ ಸೇವಾ ಸಮಿತಿ ಖಜಾಂಚಿ ಎಚ್.ಕೆ.ರವೀಶ್ ತಿಳಿಸಿದ್ದಾರೆ.

ನೆಲಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಬೆಟ್ಟದ ಸುತ್ತ ಅತ್ಯಾಧುನಿಕ ವಿದ್ಯುತ್ ಲೇಸರ್ ಮತ್ತು ವಿದ್ಯುತ್ ದೀಪಾಲಂಕಾರ ಮಾಡಿಸಿದ್ದಾರೆ.

ಪೊಲೀಸ್ ಬಿಗಿ ಭದ್ರತೆ: ಜಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 5 ಜನ ಇನ್‌ಸ್ಪೆಕ್ಟರ್, 10 ಮಂದಿ ಪೊಲೀಸ್ ಉಪ ನಿರೀಕ್ಷಕರು, 20 ಮಂದಿ ಎಎಸ್‌ಐ, 2 ಕೆಎಸ್‌ಆರ್‌ಪಿ ತುಕಡಿ, 120 ಪೊಲೀಸ್ ಪೇದೆಗಳು ಹಾಗೂ 40 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಹನುಮ ಮಾಲಾಧಾರಿಗಳ ಪಾದಯಾತ್ರೆಯ ಉದ್ದಕ್ಕೂ ಮತ್ತು ಬೆಟ್ಟದ ಮೇಲಿರುವ ದರ್ಗಾಕ್ಕೂ ಬಂದೋಬಸ್ತ್ ಇರಲಿದೆ. ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮರ್‌ಗಳನ್ನು ಅಳವಡಿಸಲಾಗಿದೆ. ಬೆಟ್ಟಕ್ಕೆ ಆಗಮಿಸುವ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಸ್ಥಳದಲ್ಲಿಯೇ ವಾಹನ ನಿಲುಗಡೆ ಮಾಡಲಾಗುತ್ತಿದೆ.

ಭಕ್ತರಿಗೆ ಅನ್ನಸಂತರ್ಪಣೆ: ದಾಬಸ್‌ಪೇಟೆ ವರ್ತಕರ ಸಂಘ ಹಾಗೂ ಜಗದೀಶ್ ಚೌಧರಿ ಅಭಿಮಾನಿಗಳ ಬಳಗದಿಂದ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕನ್ನಡ-ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ದಾಬಸ್ ಪೇಟೆ ಮಹಿಳಾ ಸಂಘದಿಂದ ದಾಬಸ್‌ಪೇಟೆ ಶಿವಗಂಗ ವೃತ್ತದಿಂದ ಸಿದ್ಧರಬೆಟ್ಟದವರೆಗೂ ಪೂರ್ಣಕುಂಭ ಸ್ವಾಗತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net