ಶ್ರೀ ಸಿದ್ದಪ್ಪಾಜಿ ಕಂಡಾಯ ಮೆರವಣಿಗೆ ಸಂಪನ್ನ

31kglphoto-1
Published on

ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ಕುರುಬನ ಕಟ್ಟೆಯ ಶ್ರೀ ಸಿದ್ದಪ್ಪಾಜಿ ಕಂಡಾಯಗಳ ಮೆರವಣಿಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.


ಗ್ರಾಮದ ಮಡಿವಾಳ ಸಮುದಾಯದ ಬಡಾವಣೆಯಲ್ಲಿ ಕಂಡಾಯ ಮೆರವಣಿಗೆ ಹಬ್ಬದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಗ್ರಾಮವನ್ನು ಶುಚಿಗೊಳಿಸಿ, ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.


ಕುರುಬನ ಕಟ್ಟೆ ಮಠದಿಂದ ಕಂಡಾಯಗಳನ್ನು ಹೊತ್ತು ತಂದಿದ್ದ ಶ್ರೀಮಠದವರು ಗ್ರಾಮದ ಹೊರ ವಲಯದ ಪಂಪ್‌ಹೌಸ್‌ನಲ್ಲಿ ಕಂಡಾಯಗಳಿಗೆ ಹೂವು ಹೊಂಬಾಳೆಯಿಂದ ಅಲಂಕಾರ ಮಾಡಿದ ನಂತರ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಡನೆ ಗ್ರಾಮದ ಬೀದಿಗಳಲ್ಲಿ ಶ್ರೀ ಸ್ವಾಮಿಯ ಕಂಡಾಯಗಳನ್ನು ಹೊತ್ತು ಮೆರವಣಿಗೆ ಮಾಡಿದರು. ಪ್ರತಿ ಮನೆಯಲ್ಲೂ ಕಂಡಾಯಗಳಿಗೆ ಹೂವು-ಹಣ್ಣು, ಕಾಯಿ-ಧೂಪ-ದೀಪಗಳೊಡನೆ ಆರತಿ ಬೆಳಗಿ ಭಕ್ತಿಯಿಂದ ಸ್ಮರಿಸಿದರು.
ಕಂಡಾಯಗಳ ಮೆರವಣಿಗೆ ಹಿನ್ನಲೆಯಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ನೆಂಟರಿಷ್ಟರು ಬಂದು ಬಳಗವನ್ನು ಕರೆದಿದ್ದರಿಂದ ಮನೆ ಮನೆಯಲ್ಲೂ ನೆಂಟರಿಷ್ಟರು ನೆರೆದಿದ್ದರು. ರಾತ್ರಿ ಅನ್ನಸಂತರ್ಪಣೆ ನೆರವೇರಿಸಲಾಯಿತು.


ಮೆರವಣಿಗೆಯಲ್ಲಿ ಸಮುದಾಯದ ಯಜಮಾನರಾದ ಎಚ್.ಸೋಮಣ್ಣ, ಸಿ.ಸೋಮಣ್ಣ, ವೀರ ಮಡಿವಾಳ ಯುವಕ ಸಂಘದ ಉಪಾಧ್ಯಕ್ಷ ಪಿ.ರೇಚಣ್ಣ, ಖಜಾಂಚಿ ನಿಂಗರಾಜು, ಸಹ ಕಾರ್ಯದರ್ಶಿ ಎಸ್. ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಎಂ.ರವಿ ಸೇರಿದಂತೆ ಗ್ರಾಮದ ಇನ್ನಿತರ ಮುಖಂಡರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net