ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿ

22spt1
ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದಲ್ಲಿ ಶನಿವಾರ ನಡೆದ ಸುಗ್ಗಿ ಉತ್ಸವದಲ್ಲಿ ಬಸವಣ್ಣ ದೇವರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯಲ್ಲಿ ಪ್ರದಕ್ಷಿಣೆ ಮಾಡಲಾಯಿತು.
Published on

ಸೋಮವಾರಪೇಟೆ; ಸುಮಾರು 960 ವರ್ಷಗಳ ಇತಿಹಾಸವಿರುವ ಸುಗ್ಗಿಕಟ್ಟೆಯಲ್ಲಿ ಯಡೂರು ಗ್ರಾಮದ ವಾರ್ಷಿಕ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಪೂಜಾ ಕಾರ್ಯಗಳು ನಡೆದವು. ಶುಕ್ರವಾರ ರಾತ್ರಿ ಸುಗ್ಗಿಕಟ್ಟೆಯಲ್ಲಿ ದೇವಿಗೆ ಎಡೆ ಇಟ್ಟ ಗ್ರಾಮಸ್ಥರು ಊರಿನ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ಉತ್ತಮ ಮಳೆಯಾಗಿ ಬರಗಾಲದ ಆತಂಕದಿಂದ ಕೃಷಿಕರನ್ನು ಮುಕ್ತಗೊಳಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.

ಸುಗ್ಗಿಕಟ್ಟೆಯಲ್ಲಿ ಮಹಿಳೆಯರು ಹರಕೆ ಮಾಡಿಕೊಂಡರು. ಇನ್ನು ಕೆಲವರು ತಮ್ಮ ಇಷ್ಟಾರ್ಥ ನೆರವೇರಿರುವ ಕಾರಣ ಹರಕೆ ತೀರಿಸಿದರು. ಪಟಾಕಿ ಸಿಡಿಸುತ್ತ, ವಾದ್ಯಗೋಷ್ಠಿಯಲ್ಲಿ ಗ್ರಾಮಸ್ಥರು ಸುಗ್ಗಿಕಟ್ಟೆ ಪ್ರದಕ್ಷಿಣೆ ಹಾಕಿದರು. ಎಡೆಯ ಸಾಮೂಹಿಕ ಭೋಜನ ನೆರವೇರಿತು.

ಶನಿವಾರ ಬೆಳಗ್ಗೆ ಗ್ರಾಮದ ದೇವರ ಬಾವಿಯಲ್ಲಿ ಬಸವಣ್ಣ ದೇವರ ಗಂಗಾಸ್ನಾನ ನಡೆಯಿತು. ನಂತರ ಬಸವಣ್ಣ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯವರು ಈಡುಗಾಯಿಯೊಂದಿಗೆ ಪೂಜೆ ಸಲ್ಲಿಸಿದರು. ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರ ಸಾಮೂಹಿಕ ಕುಣಿತದೊಂದಿಗೆ, ದೇವತಕ್ಕರ ಮೆರವಣಿಗೆ ನಡೆಯಿತು.

ಭಾನುವಾರ ಮಲ್ಲಸುಗ್ಗಿ, ಸೋಮವಾರ ಹಗಲು ಸುಗ್ಗಿ, ಮಂಗಳವಾರ ಮಾರಿ ಕಳುಹಿಸುವ ಕಾರ್ಯದೊಂದಿಗೆ ಸುಗ್ಗಿ ಉತ್ಸವ ಮುಕ್ತಾಯಗೊಳ್ಳಲಿದೆ. ವೈ.ಡಿ. ನಾಗೇಶ್, ಎ.ವಿ. ಕಾರ್ತಿಕ್, ಎ.ಟಿ. ನಾಗರಾಜು, ದಯಾನಂದ, ಜಯರಾಮ್, ಚಂದ್ರ, ಧನಂಜಯ ದೇವರ ಒಡೆಕಾರರಾಗಿ ಕರ್ತವ್ಯ ನಿರ್ವಹಿಸಿದರು. ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ವಿಜುಕುಮಾರ್, ಕಾರ್ಯದರ್ಶಿ ಹೇಮಂತ್ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net