ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ

28spt1
Published on

ಸೋಮವಾರಪೇಟೆ: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.


ದೊಡ್ಡಮನೆಕೊಪ್ಪ, ಊರೊಳಕೊಪ್ಪ, ಸಿಂಗನಳ್ಳಿ, ನಡ್ಲಕೊಪ್ಪ, ಇನಕನಹಳ್ಳಿ, ಹರಪಳ್ಳಿ, ವಣಗೂರುಕೊಪ್ಪ, ಶುಭಾಷ್‌ನಗರ, ಕರಡಿಕೊಪ್ಪ, ದೊಡ್ಡತೋಳೂರು, ಚಿಕ್ಕತೋಳೂರು ಗ್ರಾಮಗಳ ನಿವಾಸಿಗಳು ದೇವಿಗೆ ಮಡೆ ಅರ್ಪಿಸಿ, ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.


ಸುಗ್ಗಿ ಕುಣಿತದ ತಂಡದಿಂದ ಸುಗ್ಗಿ ಕುಣಿತ ನಡೆದರೆ, ಇನ್ನೊಂದೆಡೆಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು ಸಂಪ್ರಾದಾಯದಂತೆ ಕುಣಿತದಲ್ಲಿ ಪಾಲ್ಗೊಂಡರು. ಈ ವೇಳೆ ದೇವಿಯ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಸುಗ್ಗಿ ಕಟ್ಟೆಯ ಮುಖ್ಯ ರಂಗದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಹರಕೆ ಹೊತ್ತಿದ್ದ ಭಕ್ತರು ಈಡುಗಾಯಿ ಸೇವೆ ಅರ್ಪಿಸಿದರು.


ಪ್ರಧಾನ ಅರ್ಚಕರಾದ ಡಿ.ಎನ್. ಸುಧಾಕರ, ಡಿ.ಎಂ.ದಿಲೀಪ, ಟಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು. ಸುಗ್ಗಿ ಉತ್ಸವ ಸಮಿತಿ ಅಧ್ಯಕ್ಷ ಡಿ.ಎನ್.ರಾಜಗೋಪಾಲ್, ಕಾರ್ಯದರ್ಶಿ ಜಗದೀಶ, ಖಜಾಂಚಿ ಮನೋಹರ್ ಉತ್ಸವದ ನೇತೃತ್ವ ವಹಿಸಿದ್ದರು. ಗ್ರಾಮಸ್ಥರಾದ ಉದಯ ಕುಮಾರ್, ಬಿ.ಸಿ.ನವೀನ್, ಧರ್ಮಪ್ಪ, ಎಸ್.ಟಿ.ಸೋಮಪ್ಪ, ವಿರೇಶ್, ಎಸ್.ಎಂ.ಪ್ರಭಾಕರ್, ಕೌಶಿಕ್, ಪರಮೇಶ್ ದೇವಿಯ ಸೇವಾ ಕಾರ್ಯ ನಿರ್ವಹಿಸಿದರು.

ಶಾಸಕ ಅಪ್ಪಚ್ಚು ರಂಜನ್, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಪ್ರಮುಖರಾದ ದಿವ್ಯ ಮಂಥರ್‌ಗೌಡ ಮತ್ತಿತರರು ದೇಗುಲಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net