ಶ್ರೀ ಸಂತ ಸೇವಾಲಾಲ್, ಶ್ರೀ ಸಿದ್ದರಾಮೇಶ್ವರರ ಸಾಮಾಜಿಕ ಕಳಕಳಿ ಅನನ್ಯ: ಬಿ.ವೈ.ರಾಘವೇಂದ್ರ

SKP WEEEEB
Published on

ಶಿಕಾರಿಪುರ: ಶ್ರೀ ಸಂತ ಸೇವಾಲಾಲ್ ಮತ್ತು ಶರಣ ಸಿದ್ದರಾಮೇಶ್ವರರು ಅತ್ಯಂತ ಸಾಮಾಜಿಕ ಕಳಕಳಿಯುಳ್ಳ ಮಹಾಂತರಾಗಿದ್ದರು. ಅವರ ಸಾಮಾಜಿಕ ಕಳಕಳಿ ಅದ್ಭುತವಾಗಿತ್ತು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶುಕ್ರವಾರ ಸಮೀಪದ ಎಂಸಿಆರ್‌ಪಿ ಕಾಲನಿಯಲ್ಲಿ ಶ್ರೀ ಸಿದ್ದರಾಮೇಶ್ವರ ಮತ್ತು ಶ್ರೀ ಸೇವಾಲಾಲ್ ಸಭಾಭವನ ಉದ್ಘಾಟಿಸಿ ಮಾತನಾಡಿ, ಇಬ್ಬರು ಮಹನೀಯರು ಸಹನೆ, ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ನೀಡಿ ಜನಮನದಲ್ಲಿ ಅರಿವು ಮೂಡಿಸಿದರು. ಅವರ ಸಂದೇಶಗಳು ಮತ್ತು ವಚನಗಳ ಸಂಗ್ರಹವಾಗಬೇಕು. ಪ್ರತಿ ಮನೆ ಮನೆಗಳಲ್ಲಿ ಅವರ ದಿವ್ಯ ಸಂದೇಶಗಳ ಪುಸ್ತಕಗಳಿರಬೇಕು ಎಂದು ಹೇಳಿದರು.

ಧಾರ್ಮಿಕ ಚಿಂತನೆಗಳು ನಮ್ಮನ್ನು ಸದಾ ಸರಿದಾರಿಯಲ್ಲಿ ಕರೆದುಕೊಂಡು ಹೋಗುತ್ತವೆ. ಪ್ರತಿ ಸಮುದಾಯದಲ್ಲಿ ಜನಿಸಿದ ಮಹಾತ್ಮರು ಸಮಾಜವನ್ನು ಉದ್ಧಾರದ ಹೆದ್ದಾರಿಯಲ್ಲಿ ಕೊಂಡೊಯ್ಯಲು ಶ್ರಮಿಸಿದರು. ಯಾವುದೇ ಸಮಾಜವಿರಲಿ ಸಂಘಟನೆಯಿಂದ ಆ ಸಮಾಜಕ್ಕೆ ಭೀಮಬಲ ಬರುತ್ತದೆ. ಸಂಘಟಿತ ಪ್ರಯತ್ನಗಳಿಗೆ ಯಾವತ್ತೂ ಸೋಲಿಲ್ಲ ಎಂದರು.

ಶಿಕಾರಿಪುರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣವಾಗಿದ್ದು, ಸದ್ಯದಲ್ಲಿ ಲೋಕಾರ್ಪಣೆಯಾಗಲಿದೆ. ಇದರಿಂದ ಬಹುತೇಕ ಸಾರಿಗೆ ಸಂಪರ್ಕ ಇಲ್ಲದಿರುವ ಹಳ್ಳಿಗಳಿಗೆ ಬಸ್ ಸೇವೆ ಸಿಗಲಿದೆ. ತಾಲೂಕಿನಿಂದ ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಮುಂತಾದ ಕಡೆಗಳಿಗೆ ಬಸ್ ಸೌಲಭ್ಯ ದೊರೆಯಲಿದೆ. ತಾಲೂಕಿಗೆ ರೈಲು ಮಾರ್ಗವಾದರೆ ಸಂಪರ್ಕ ಕ್ರಾಂತಿ ಆಗುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಜನಸಾಮಾನ್ಯರು ರಾಜ್ಯ ಹೊರ ರಾಜ್ಯಗಳಿಗೆ ಸಂಚರಿಸಲು ಅನುಕೂಲವಾಗಲಿದೆ ಎಂದರು.

ಇದೇ ವೇಳೆ ಎಂಸಿಆರ್ ಕಾಲನಿಯ ನೂತನ ಬಸ್ ತಂಗುದಾಣವನ್ನು ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net