

ಹಾಸನ: ನಗರದ ಶ್ರೀ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಜವೇನಹಳ್ಳಿ ಮಠದಲ್ಲಿ ಗುರುವಾರ ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿಗಳ 38ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮವು ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಿತು.
ಬಳಿಕ ಶ್ರೀ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀ ಜವೇನಹಳ್ಳಿ ಮಠದಲ್ಲಿ ಲಿಂಗೈಕರಾಗಿರುವ ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿಗಳ 38ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ತ್ರಿಮೂರ್ತಿಗಳ ಗದ್ದುಗೆಗೆ ರುದ್ರಾಭಿಷೇಕ, ಮಹಾಮಂಗಳಾರತಿಯು ಗುರುವಾರ ಮುಂಜಾನೆಯಿಂದಲೇ ನೆರವೇರಿದೆ. ಶ್ರೀ ಬಸವಾಪಟ್ಟಣದ ಬಸವಲಿಂಗ ಮಹಾಸ್ವಾಮೀಜಿ, ಅರಕಲಗೂಡಿನ ಚೆಲುಮೆ ಮಠದ ಜಯದೇವ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಹಾಗೂ ಜವೇನಹಳ್ಳಿ ಮಠದ ಹಿತಾರಕ್ಷಣಾ ಸಮಿತಿ ಅಧ್ಯಕ್ಷರಾದ ಉಮೇಶ್, ಕಾರ್ಯದರ್ಶಿ ಪರಮಶಿವಯ್ಯ, ಶೋಭನ್ ಬಾಬು, ಹೇಮಂತ್ ಕುಮಾರ್, ಇಂದ್ರಮ್ಮಾ, ಕಟ್ಟಾಯ ಶಿವಕುಮಾರ್ ಸೇರಿದಂತೆ ಭಕ್ತಾಧಿಗಳ ನೇತೃತ್ವದಲ್ಲಿ ಗುರುಗಳ ಪುಣ್ಯಾರಾಧನೆ ಮತ್ತು ಆರಾಧಾನ ಮಹೋತ್ಸವ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಗುರುಗಳ ಆಶೀರ್ವಾದವು ವಿಶ್ವಕ್ಕೆ ಸಿಗಲೆಂದು ಆರಾಧನಾ ಮಹೋತ್ಸವವನ್ನು ಮಾಡಲಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಗುರುಗಳ ಅವಶ್ಯಕತೆ ಇದ್ದು, ಅವರ ಸ್ಮರಣೆ ಮಾಡುವುದು, ಗುರು ಕೃಪೆಗೆ ಪಾತ್ರರಾಗುವುದು ಭಕ್ತರಲ್ಲಿ ಇರುತ್ತದೆ. ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿಗಳೂ 38 ವರ್ಷಗಳ ಹಿಂದೆ ಶ್ರೀ ಜವೇನಹಳ್ಳಿ ಮಠವನ್ನು ಬಹಳ ಅತ್ಯುತ್ತಮವಾಗಿ ತಂದಿದ್ದರು. ಅಭಿವೃದ್ಧಿ ಕಾರ್ಯಕ್ರಮ ನಡೆಸಿದ್ದಾರೆ. ಅವರ ಸೇವೆಯನ್ನು ನಾವುಗಳು ಮರೆಯುವಾಗಿಲ್ಲ ಎಂದು ಹೇಳಿದರು.