

ಮೈಸೂರು: ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ 2023ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಸಾಹಿತಿ ಡಾ.ಓ.ಎಲ್.ನಾಗಭೂಷಣಸ್ವಾಮಿ ಅವರ ‘ಉಲಿವ ಮರ’ ಹಾಗೂ ಎಚ್.ಎಸ್.ಸಿದ್ದಗಂಗಪ್ಪ ಅವರ ‘ಶಿವಶರಣರು ಮತ್ತು ಜನಪದ ಕಲೆಗಳು’ ಈ ಎರಡು ಕೃತಿಗಳು ಆಯ್ಕೆಯಾಗಿವೆ.
ಡಾ.ನಾಗಭೂಷಣಸ್ವಾಮಿ ಅವರು ಸಾಹಿತ್ಯ ವಿಮರ್ಶೆ ಹಾಗೂ ಭಾಷಾಂತರ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಸ್ವರಚಿತ, ಅನುವಾದಿತ, ಸಂಪಾದಿತ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 71ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ವಿವಿಧ ಸಾಹಿತ್ಯ ಅಕಾಡೆಮಿಗಳು, ಪಠ್ಯಪುಸ್ತಕಗಳ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಎಚ್.ಎಸ್.ಸಿದ್ದಗಂಗಪ್ಪ ಅವರು ಜಾನಪದ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿರುವವರು.
ಜಾನಪದ, ಶರಣ ಸಾಹಿತ್ಯ, ಜೀವನ ಚರಿತ್ರೆ, ಸಂಪಾದಿತ ಕೃತಿಗಳು ಹೀಗೆ ವಿವಿಧ ಪ್ರಕಾರಗಳಲ್ಲಿ 63ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಹಲವಾರು ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇಬ್ಬರು ಲೇಖಕರಿಗೂ ತಲಾ 25 ಸಾವಿರ ರೂ. ನಗದು, ಪ್ರಶಸ್ತಿಫಲಕ, ಸ್ವಸ್ತಿವಾಚನ, ಫಲತಾಂಬೂಲ ನೀಡಿ ಗೌರವಿಸಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಜೆಎಸ್‌ಎಸ್ ವಿದ್ಯಾಪೀಠದ ಪ್ರಕಣದ ವಿಭಾಗದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ