ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

01Kush02
Published on

ಕುಶಾಲನಗರ: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದ ಶ್ರೀ ವೀರಶೈವ ಸಮಾಜ, ಬಸವೇಶ್ವರ ಸಮಿತಿ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿ, ಗುರುವಂದನಾ ಸ್ಮರಣೆ ಕಾರ್ಯಕ್ರಮವು ಶನಿವಾರ ಅದ್ದೂರಿಯಾಗಿ ನಡೆಯಿತು.


ಹುಲುಸೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಕಾವೇರಿ ನದಿಗೆ ಗಂಗಾಪೂಜೆ, ಕಳಸ ಪೂಜೆ ಮಾಡಿ ಭಕ್ತಾದಿಗಳು ಕಾವೇರಿ ನದಿಯಿಂದ ಮಂಗಳವಾದ್ಯಗಳೊಂದಿಗೆ ನದಿಯಿಂದ ಗ್ರಾಮದ ಬಸವೇಶ್ವರ ದೇವಾಲಯದವರೆಗೆ ಮೆರವಣಿಗೆಯಲ್ಲಿ ಸಾಗಿದರು.


ಸಂಜೆ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ವಿದ್ಯುತ್ ದೀಪಗಳಿಂದ ಮತ್ತು ಹೂವಿನಿಂದ ಸಿಂಗಾರಗೊಂಡಿದ್ದ ಟ್ರಾೃಕ್ಟರ್‌ನಲ್ಲಿ ಸ್ವಾಮೀಜಿಯ ಬೃಹತ್ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಜಯಂತಿ ಅಂಗವಾಗಿ ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು. ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಭಕ್ತರಿಗೆ ಅನ್ನ ದಾಸೋಹ ಕಾರ್ಯಕ್ರಮವು ನಡೆಯಿತು.


ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಹುಲುಸೆ ಗ್ರಾಮದ ಸದಸ್ಯ ಎಚ್.ಎನ್.ಶಿವನಂಜಪ್ಪ, ಗ್ರಾಮದ ಪ್ರಮುಖರಾದ ಎಚ್.ಎಸ್.ಮಲ್ಲಿಕಾರ್ಜುನ, ಬಸವರಾಜ್, ಶಿವರುದ್ರಪ್ಪ, ಶಿವನಂಜಪ್ಪ, ಪುಟ್ಟಸ್ವಾಮಿ, ರಾಜೇಂದ್ರ, ಧನಂಜಯ, ಸಮಿತಿಯ ಪ್ರಮುಖರು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net