

ಶೃಂಗೇರಿ: ಶೃಂಗೇರಿ ಶ್ರೀ ಶಾರದಾಪೀಠದ ಶರನ್ನವರಾತ್ರಿ ಮಹೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಭಾದ್ರಪದ ಕೃಷ್ಣ ಅಮಾವಾಸ್ಯೆ ಪ್ರಯುಕ್ತ ಶ್ರೀ ಶಾರದೆಗೆ ಮಹಾಭಿಷೇಕ ನೆರವೇರಿತು. ಶ್ರೀ ಜಗನ್ಮಾತೆಗೆ ವಿಧವಿಧದ ಫಲ-ಪಂಚಾಮೃತ ಅಭಿಷೇಕದ ಬಳಿಕ ಮೂಲಬಿಂಬದ ಹರಿದ್ರಾದರ್ಶನ, ನೀರಾಜನ, ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀಸೂಕ್ತ ಪಠಣದಿಂದ ಅಭಿಷೇಕ ನೆರವೇರಿತು. ಜಗದ್ಗುರುಗಳ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಶ್ರೀ ಶಾರದೆ ಜಗತ್ಪ್ರಸೂತಿಕಾ ಅಲಂಕಾರದಲ್ಲಿ ಕಂಗೊಳಿಸಿದಳು. ಶ್ರೀ ಶಾರದೆ ತೊಡೆಯ ಮೇಲೆ ಮುದ್ದಾದ ಮಗುವನ್ನು ಮಲಗಿಸಿಕೊಂಡು ಈ ಜಗತ್ತಿನ ಸೃಷ್ಟಿಗೆ ನಾನೇ ತಾಯಿ. ನೀನು ಮಗುವಿನಂತೆ. ನೀನು ನನ್ನನ್ನು ಭಜಿಸುವಿಯಾದರೆ ಈ ಮಗುವಿನಂತೆ ಸದಾ ನಿನ್ನನ್ನು ರಕ್ಷಿಸುತ್ತೇನೆ ಎಂದು ಭಕ್ತನನ್ನು ಕುರಿತು ಕೇಳುತ್ತಿದ್ದಾಳೋ ಎಂಬಂತೆ ಭಾಸವಾಗುವ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. ಸಂಜೆ ಶ್ರೀ ಶಾರದೆಯ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ನಿರ್ವಿಘ್ನವಾಗಿ ನಡೆಯಲು ಶ್ರೀ ಶಕ್ತಿಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಅಷ್ಟಾವಧಾನ ಸೇವೆ, ಶ್ರೀ ಜಗನ್ಮಾತೆಗೆ ಪೂಜೆ, ಸ್ವರ್ಣರಥೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.
ಮಠದ ನರಸಿಂಹವನದ ಅಧಿಷ್ಠಾನ ಮಂದಿರದಲ್ಲಿ ಭಾನುವಾರ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮೀಜಿ ಆರಾಧನಾ ಮಹೋತ್ಸವವನ್ನು ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಧಾರ್ಮಿಕ ವಿಧಿವಿಧಾನಗಳ ಬಳಿಕ ವಿಶೇಷ ಪೂಜೆ ನೆರವೇರಿಸಿದರು.
ನವರಾತ್ರಿ ಪ್ರಯುಕ್ತ ಶ್ರೀ ಶಾರದಾಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮ ಸೆ.21ರಂದು ನೆರವೇರಲಿದೆ. ಜಗನ್ಮಾತೆ ಹಂಸವಾಹನಾಲಂಕಾರದಲ್ಲಿ ವಿರಾಜಮಾನಳಾಗಿ ಭಕ್ತರನ್ನು ಅನುಗ್ರಹಿಸಲಿದ್ದಾಳೆ. ಸಂಜೆ 6 ಗಂಟೆಗೆ ನೆರವೇರಲಿರುವ ಬೀದಿ ಉತ್ಸವಕ್ಕೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಹಾಗೂ ಸಂಘಸಂಸ್ಥೆಗಳು ಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲಿವೆ.