ಶ್ರೀ ಶಾರದಾಂಬಾ ಅದ್ದೂರಿ ಮಹಾರಥೋತ್ಸವ

sri swamiji
ಶೃಂಗೇರಿ ವಿಜಯದಶಮಿ ಮಹಾರಥೋತ್ಸವ ಪ್ರಯುಕ್ತ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
Published on

ಶೃಂಗೇರಿ: ಶೃಂಗೇರಿ ನವರಾತ್ರಿ ಹಬ್ಬದ ಮಹತ್ವಪೂರ್ಣ ಶ್ರೀ ಶಾರದಾಂಬಾ ಮಹಾರಥೋತ್ಸವ ಹಾಗೂ ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರ ಅಡ್ಡಪಲ್ಲಕ್ಕಿ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಂಗಳೂರು, ಉಡುಪಿ ಮುಂತಾದ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ರಥೋತ್ಸವ ಹಾಗೂ ಜಗದ್ಗುರುಗಳ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಮುಖ್ಯಬೀದಿಯ ಇಕ್ಕೆಲಗಳಲ್ಲಿ ಜಮಾಯಿಸಿದರು. ಮಠದಿಂದ ಆಗಮಿಸಿದ ಶ್ರೀ ಶಾರದೆಯ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿದ ಬಳಿಕ ಮಹಾರಥೋತ್ಸವ ಪ್ರಾರಂಭಗೊಂಡಿತು.

ತಳಿರುತೋರಣ, ರಂಗವಲ್ಲಿ, ಸಾಲಂಕೃತಗೊಂಡ ಆನೆಗಳು, ಅಶ್ವಗಳು, ಮಠದ ಛತ್ರಿ ಚಾಮರಗಳು, ತಟ್ಟಿರಾಯಗಳು, ವೇದ-ವಾದ್ಯಘೋಷಗಳು, ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಸ್ತಬ್ಧ ಚಿತ್ರಗಳು ಉತ್ಸವಕ್ಕೆ ಮೆರುಗು ನೀಡಿದವು.

ಜೈ-ಜೈ ಮಾತಾ ಶಾರದಾಮಾತಾ, ಎಂಥ ಚೆಂದ ಎಂಥ ಅಂದ ಶಾರದಮ್ಮ ಎಂದು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಭಜನಾಮಂಡಳಿಗಳು, ವಿಶ್ವಕರ್ಮ ಗೆಳೆಯರ ಬಳಗ ಅವರ ಗೀತೋಪದೇಶ, ಗುತ್ಯಮ್ಮ ಕನ್ಸ್‌ಸ್ಟ್ರಕ್ಸನ್ ಅವರ ದೇವಿ ಅವತಾರಗಳು.ನಲ್ಲೂರು ಶ್ರೀ ಬ್ರಹ್ಮಲಿಂಗೇಶ್ವರ ಸಿದ್ಧಿವಿನಾಯಕ ದೇವಸ್ಥಾನದಿಂದ ದೇವಿಯ ಅವತಾರ. ಸೋಮಲಾಪುರ ಅವರ ನಾಸಿಕ್ ಬ್ಯಾಂಡ್, ಜಯಪುರ ಕಲಾತಂಡದ ಹುಲಿವೇಷ ಕುಣಿತ, ವೈಕುಂಠಪುರ ಸಾಂಸ್ಕೃತಿಕ ಬಳಗದ ಮರಗಾಲು ಕುಣಿತ, ನಾಟ್ಯ ವೈಭವ ನೃತ್ಯ ಅಕಾಡೆಮಿ ಅವರ ಮಹಿಷಾಸುರ ಮರ್ಧಿನಿ ಸ್ತಬ್ಧಚಿತ್ತ, ರಕ್ತೇಶ್ವರಿ ರಮೇಶ್ ಹಾಗೂ ತಂಡದವರು ಸಮರ್ಪಿಸಿದ ತ್ರಿವೇಣಿ ಮಹಾಸ್ತೋತ್ರ ಮಹಾಸಂಗಮ, ಜಯಭಾರತೀ ವಿದ್ಯಾಲಯದ ಕಪ್ಪೆಗೆ ನೆರಳು ನೀಡಿದ ಹಾವಿನ ಸ್ತಬ್ಧ ಚಿತ್ರ, ಕುಂಬಾರ ಮಡಕೆ ಮಾಡುವ ದೃಶ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಭಾಗವಹಿಸಿದ ಜಾನಪದ ಕಲಾತಂಡಗಳು ಉತ್ಸವಕ್ಕೆ ಮೆರುಗು ನೀಡಿದವು. 42ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು, 20 ಕಲಾತಂಡಗಳು ಮಹಾರಥೋತ್ಸವದಲ್ಲಿ ಭಾಗಿಯಾಗಿದ್ದವು.

ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರಿಗೆ ಪಟ್ಟಣದ ನಾಗರಿಕರು ಹಣ್ಣು ಸಮರ್ಪಿಸಿ ಆಶೀರ್ವಾದ ಪಡೆದರು. ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಭೋಜನಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net