

ಸಿರವಾರ: ಸಮೀಪದ ನಿಲೋಗಲ್ ಗ್ರಾಮದ ಶ್ರೀಶಾಂಭವಿ ಶಾಂತಮಲ್ಲೇಶ್ವರ ಜಾತ್ರೋತ್ಸವ ಹಾಗೂ ಡಾ.ಪಂಚಾಕ್ಷರಿ ಶಿವಾಚಾರ್ಯರ 75ನೇ ಜನ್ಮದಿನದ ಪ್ರಯುಕ್ತ ಜ.17 ರಿಂದ ಜ.27ರವರೆಗೆ ಪುರಾಣ ಪ್ರವಚನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಅಭಿನವ ಶ್ರೀರೇಣುಕ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.
ನಿಲೋಗಲ್ ಶ್ರೀಶಾಂಭವಿ ಶಾಂತಮಲ್ಲೇಶ್ವರ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ.ಪಂಚಾಕ್ಷರಿ ಶಿವಾಚಾರ್ಯರು ಈ ಭಾಗದ ದೈವ ಸ್ವರೂಪಿ, ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಮನೆ ಮಾತಾಗಿದ್ದಾರೆ. ಶ್ರೀಗಳು ಎರಡು ಸಾವಿರಕ್ಕೂ ಹೆಚ್ಚಿನ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಅನೇಕ ದೇವಸ್ಥಾನಗಳು ಜೀರ್ಣೋದ್ಧಾರ ಕೈಗೊಂಡಿದ್ದರು. ಹಿರಿಯ ಶ್ರೀಗಳು ಜೀವನವನ್ನು ಸಮಾಜಕ್ಕೆ, ಧರ್ಮದ ಏಳಿಗೆಗಾಗಿ ಮೀಸಲಿಟ್ಟಿದ್ದರು ಎಂದರು.
ಜಾತ್ರೋತ್ಸವ ನಿಮಿತ್ತ ಪ್ರತಿದಿನ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜ.26 ನೂತನ ಉಚ್ಛಾಯ ಹಾಗೂ 27ರಂದು ಬೆಳಗ್ಗೆ ಧರ್ಮಸಭೆ, ಪೂಜಾ ಕೈಂಕರ್ಯ, ಸಾಮೂಹಿಕ ವಿವಾಹ ಹಾಗೂ ಸಂಜೆ ಮಹಾ ರಥೋತ್ಸವ ಜರುಗಲಿದೆ. ವಿವಿಧ ಮಠಗಳ ಪೂಜ್ಯರು, ಸಚಿವರು, ಶಾಸಕರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಡಾ.ಪಂಚಾಕ್ಷರಿ ಮಹಾಸ್ವಾಮಿಗಳು, ಪ್ರಮುಖರಾದ ಶಾಂತಕುಮಾರ ಮಠದ, ಬಸವಲಿಂಗಯ್ಯ ಸ್ವಾಮಿ ಅತ್ತನೂರು, ಚನ್ನಯ್ಯ ಸ್ವಾಮಿ ಶಾಖಾಪುರ, ಬಸನಗೌಡ ಪಾಟೀಲ್ ಅತ್ತನೂರು ಇದ್ದರು.