

ತಿ.ನರಸೀಪುರ: ಪಟ್ಟಣದ ಲಿಂಕ್ ರಸ್ತೆಯಲ್ಲಿ ಗುರುವಾರ ಶ್ರೀ ಶನೈಶ್ಚರ ಸ್ವಾಮಿಯ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಶ್ರೀ ಶನೈಶ್ಚರ ಸ್ವಾಮಿ ಸಮಿತಿಯ 24 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮುಖ್ಯ ಪೂಜಾ ಮಹೋತ್ಸವದಲ್ಲಿ ಸ್ವಾಮಿಗೆ ಎರಡು ದಿನ ಪೂಜೆ ನೆರವೇರಿಸಲಾಯಿತು. ಉತ್ಸವದಲ್ಲಿ ಜನರು ಭಾಗವಹಿಸಿ ದೇವರ ದರ್ಶನ ಪಡೆದರು. ಬದನವಾಳು ಶಿವಕುಮಾರ ಶಾಸ್ತ್ರಿ ಹರಿಕಥೆ ಹಮ್ಮಿಕೊಳ್ಳಲಾಗಿತ್ತು. ಟಿಎಪಿಸಿಎಂಎಸ್ ಆವರಣದಲ್ಲಿ ಸಾರ್ವಜನಿಕರಿಗೆ ದಾಸೋಹ ರ್ಪಡಿಸಲಾಗಿತ್ತು.
ಸ್ವಾಮಿಯ ಭಾವಚಿತ್ರವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಹೂವು, ಹಣ್ಣು, ತರಕಾರಿ ಹಾಗೂ ತುಳಸಿ ಎಲೆಗಳಿಂದ ಸ್ವಾಮಿಯನ್ನು ಸಿಂಗರಿಸಲಾಗಿತ್ತು. ಮಹೋತ್ಸವದ ಅಂತಿಮ ದಿನವಾದ ಹಿನ್ನೆಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಚಿಲ್ಲರೆ ಅಂಗಡಿ ವರ್ತಕರು,ಚಿನ್ನ ಬೆಳ್ಳಿ ವ್ಯಾಪಾರಿಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಉತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಲಿಂಕ್ ರಸ್ತೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು.
ಸಮಿತಿ ಸದಸ್ಯ ಅಂಗಡಿ ನಾಗೇಶ್ ಮಾತನಾಡಿ, ಉತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗಿದೆ. ಕಳೆದ ಬಾರಿ ಸಾರ್ವಜನಿಕ ವಿವಾಹ ಕಾರ್ಯಕ್ರಮ ಕಾರಣಾಂತರಗಳಿಂದ ನಡೆಸಲು ಸಾಧ್ಯವಾಗಿಲ್ಲ. 25 ನೇ ವಾರ್ಷಿಕೋತ್ಸವವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಸಹ ಇರಲಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಪಿ.ಸುಬ್ರಹ್ಮಣ್ಯ ಮಾತನಾಡಿ, ಟಿಎಪಿಸಿಎಂಎಸ್ ವತಿಯಿಂದ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಟಿಎಪಿಸಿಎಂಎಸ್ ಉಪಾಧ್ಯಕ್ಷ ಮಲ್ಲಣ್ಣ, ಕಾರ್ಯದರ್ಶಿ ರಘುನಂದನ್, ಪುರಸಭಾ ಸದಸ್ಯರಾದ ಎಸ್.ಕೆ.ಕಿರಣ್, ಬಾದಾಮಿ ಮಂಜು, ಪಿಂಜಾರಾ ಪೋಲ್ ಟ್ರಸ್ಟ್ ಅಧ್ಯಕ್ಷ ಸುಭಾಷ್ ಚೌದರಿ, ಕಸಬಾ ಪಿಎಸಿಸಿಎಸ್ ನಿರ್ದೇಶಕ ಟಿ.ಸಿ.ಫಣೀಶ್‌ಕುಮಾರ್, ನಾಗರಾಜು (ಜೋಗಿ ), ತಿರುಮಕೂಡಲು ಲಕ್ಷ್ಮಣ, ನಾಗರಾಜು, ಗೋವಿಂದರಾಜು ಇತರರು ಇದ್ದರು.