ಶ್ರೀ ವೀರಭದ್ರೇಶ್ವರ ಸ್ವಾಮಿ ಮರು ಪ್ರತಿಷ್ಠಾಪನೆ

ald darmika
Published on

ಆಲ್ದೂರು: ಇಳೆಖಾನ್ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಮರು ಪ್ರತಿಷ್ಠಾಪನೆ ನೆರವೇರಿಸಲಾಯಿತು. ಈ ಹಿಂದೆ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿಯ ವಿಗ್ರಹ ಸಡಿಲಗೊಂಡಿದ್ದ ಕಾರಣ ಮರುಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶುಕ್ರವಾರದಿಂದ ಭಾನುವಾರದವರೆಗೆ ವಿಶೇಷ ಪೂಜೆಗಳು ಜರುಗಿದವು.

ಶುಕ್ರವಾರ ಬೆಳಗ್ಗೆ ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಮೂರ್ತಿಯನ್ನು ಪೀಠದಿಂದ ತೆರವುಗೊಳಿಸಿ ಜಲಾದಿವಾಸ ಮಾಡಲಾಯಿತು. ಗ್ರಾಮದ ಹೊರಭಾಗದಲ್ಲಿರುವ ಹೊಳೆಮಲ್ಲೇಶ್ವರ ಹಾಗೂ ಈಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಿತು. ಸೋಮವಾರ ಮಧ್ಯಾಹ್ನ ಶ್ರೀ ವೀರಭದ್ರೇಶ್ವರ ಮೂರ್ತಿಯನ್ನು ಜಲಾದಿವಾಸದಿಂದ ತೆರವುಗೊಳಿಸಿ ಧಾನ್ಯಾದಿವಾಸ ಹಾಗೂ ಪುಷ್ಟಾದಿವಾಸ ಮಾಡಲಾಯಿತು. ರಾತ್ರಿ ರುದ್ರಹೋಮ ಜರುಗಿತು. ಮಂಗಳವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದ ಮುತ್ತೈದೆಯರು ಪೂಜಿಸಿ ತಂದ ಗಂಗೆಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ, ದೇವಸ್ಥಾನದ ಕಲಶಕ್ಕೆ ರುದ್ರಾಭಿಷೇಕ ನೆರವೇರಿಸಲಾಯಿತು. ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಸುಮುಖದಲ್ಲಿ ಪ್ರಾಣಪ್ರತಿಷ್ಠೆ ಹಾಗೂ ವಿವಿಧ ಪೂಜಾ ಕೈಂಕರ್ಯ ಜರುಗಿದವು.

ಗ್ರಾಮಸ್ಥರು ಹಳ್ಳಿ ವಾದ್ಯಕ್ಕೆ ತಕ್ಕಂತೆ ಕುಣಿದು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಇ.ಸಿ.ಉಮೇಶ್, ದೇವಾಲಯದ ಅರ್ಚಕರಾದ ತೋಂಟದಾರ್ಯ ಸ್ವಾಮಿ, ಚಂದ್ರಶೇಖರಯ್ಯ, ಸದಾಶಿವಯ್ಯ, ಗಂಗಾಧರಯ್ಯ, ಮಲ್ಲಿಕಾರ್ಜುನಯ್ಯ, ಇ.ಸಿ.ಕುಮಾರ್, ಶಿವಕುಮಾರ್, ಶಿವಾನಂದ್, ಬಸವರಾಜ್, ಮಲ್ಲೇಶಯ್ಯ, ರಮೇಶ್ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net