

ಚಿಟಗುಪ್ಪ: ದೀಪಗಳ ಹಬ್ಬ ದೀಪಾವಳಿಯೊಂದಿಗೆ ಮೀನಕೇರಾ ಗ್ರಾಮದಲ್ಲಿ ಶ್ರೀ ಗವಿ ವೀರಭದ್ರೇಶ್ವರ ಜಾತ್ರೋತ್ಸವ ಶುರುವಾಗಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎತ್ತರದ ಗುಡ್ಡ, ಹಚ್ಚ ಹಸಿರ ಸೊಬಗಿನ ಮಧ್ಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತನ್ನದೇ ವೈಶಿಷ್ಟ್ಯವಿದೆ. ಇಲ್ಲಿನ ಗವಿಯಲ್ಲಿ ಗವಿ ಮನೆತನದ ಸ್ವಾಮೀಜಿಯೊಬ್ಬರು ಆಂಧ್ರದ ಸುಕ್ಷೇತ್ರವೊಂದರಿಂದ ಶ್ರೀ ವೀರಭದ್ರೇಶ್ವರ ಮೂರ್ತಿ ತಂದು ಪ್ರತಿಷ್ಠಾಪಿಸಿ ಪೂಜೆ ಆರಂಭಿಸಿದ್ದರು. ಹೀಗಾಗಿ ಇದು ಜಾಗೃತ ಸ್ಥಳ ಹಾಗೂ ಭಕ್ತಿಯ ತಾಣವಾಗಿ ಪರಿಣಮಿಸಿದ್ದಲ್ಲದೆ ಭಕ್ತರು ಬೇಡಿದ ವರವ ಕರುಣಿಸುವ ಆರಾಧ್ಯ ದೈವವಾಗಿದ್ದಾರೆ.
ಬೀದರ್-ಚಿಂಚೋಳಿ ರಾಜ್ಯ ಹೆದ್ದಾರಿ ಮಧ್ಯದ ಮೀನಕೇರಾದಿಂದ ಅರ್ಧ ಕಿಮೀ ದೂರದಲ್ಲಿರುವ ದೇವಸ್ಥಾನ ಅಭಿವೃದ್ಧಿ ಪಥದತ್ತ ಸಾಗಿದ್ದು, ಜಾತಿ, ಭೇದ ಎನ್ನದೆ ಎಲ್ಲ ಸಮುದಾಯದವರು ಜಾತ್ರೆಗೆ ಆಗಮಿಸಿ ಆರಾಧಿಸುತ್ತಾರೆ.
ವೈಭವದ ರಥೋತ್ಸವ ೨ರಂದು: ಮೀನಕೇರಾದಲ್ಲಿ ಬುಧವಾರದಿಂದ ಐದು ದಿನ ಶ್ರೀ ಗವಿ ವೀರಭದ್ರೇಶ್ವರ ೭೦ನೇ ಜಾತ್ರೋತ್ಸವ ಜರುಗಲಿದೆ. ಗುರುವಾರ ಬೆಳಗ್ಗೆ ೧೧ಕ್ಕೆ ರಂಗೋಲಿ ಸ್ಪರ್ಧೆ, ಶುಕ್ರವಾರ ಬೆಳಗ್ಗೆ ೧೦ಕ್ಕೆ ಕಲಕೇರಿಯ ಶ್ರೀ ಸಿದ್ಧರಾಮ ಶಿವಾಚಾರ್ಯರ ನೇತೃತ್ವದಲ್ಲಿ ಕುಂಭ ಕಳಸ ಮೆರವಣಿಗೆ, ೧೧ಕ್ಕೆ ಮುಕ್ತ ವಾಲಿಬಾಲ್ ಪಂದ್ಯಾವಳಿ, ರಾತ್ರಿ ೮ಕ್ಕೆ ಪಲ್ಲಕ್ಕಿ ಉತ್ಸವ, ೧೦ಕ್ಕೆ ಅಗ್ನಿಪೂಜೆ ಹಾಗೂ ರಾತ್ರಿ ೧೧ರಿಂದ ನಾಟಕ ಪ್ರದರ್ಶನ ನಡೆಯಿದೆ. ನ.೨ರಂದು ರಾತ್ರಿ ೯ಕ್ಕೆ ವೈಭವದ ರಥೋತ್ಸವ ಹಾಗೂ ನಾಟಕ ಪ್ರದರ್ಶನ ಜರುಗಲಿದ್ದು, ಮರುದಿನ ಬೆಳಗ್ಗೆ ಜಂಗಿ ಕುಸ್ತಿ, ಸಂಜೆ ಪಲ್ಲಕಿ ನಿರ್ಗಮನ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾಗುವಂತೆ ಸದ್ಭಕ್ತ ಮಂಡಳಿ ಕೋರಿದೆ.
ವಾಲಿಬಾಲ್ ಪಂದ್ಯಾವಳಿ: ಶ್ರೀ ಗವಿ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ಬೆಳಗ್ಗೆ ೧೧ಕ್ಕೆ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ವಿಜೇತ ತಂಡಕ್ಕೆ ಪ್ರಥಮ ೨೦,೦೦೦, ದ್ವಿತೀಯ ೧೦,೦೦೦ ಮತ್ತು ತೃತೀಯ ೫,೦೦೦ ರೂ. ಬಹುಮಾನ ನೀಡಲಾಗುವುದು. ಆಸಕ್ತ ತಂಡಗಳು ಹೆಸರು ನೋಂದಾಯಿಸಬಹುದು. ಮಾಹಿತಿಗೆ ಲಿಂಗರಾಜ ರೊಡ್ಡಾ, ಪ್ರಶಾಂತ ಬಂಬಳಗಿ, ನಾಗೇಶ ರೊಡ್ಡಾ (ಮೊ.೭೦೯೦೮ ೩೦೪೧೧, ೮೭೨೨೭ ೫೨೬೪೦, ೭೪೮೩೫ ೨೩೬೨೪) ಅವರನ್ನು ಸಂಪರ್ಕಿಸಬಹುದು.