

ನೆಲಮಂಗಲ: ತಾಲೂಕಿನಲ್ಲಿ ಶಮಿಗಿರಿ ಕ್ಷೇತ್ರವೆಂದೆ ಪ್ರಸಿದ್ಧವಾದ ಬಸವನಹಳ್ಳಿಯ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಶ್ರೀ ವೆಂಕಟರಮಣ ಸ್ವಾಮಿ, ವೈನತೇಯ ಹಾಗೂ ಲಕ್ಷ್ಮೀ ದೇವರಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಸಾಲಿನಲ್ಲಿ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು.
ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವ ಮೂರ್ತಿಯನ್ನು ವಿಶೇಷ ಹೂವುಗಳಿಂದ ಅಲಂಕಾರ ಮಾಡಿದ್ದ ರಥದಲ್ಲಿರಿಸಿ ವೇದ ಮಂತ್ರ ಘೋಷಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಭಕ್ತರು ದವನ ಸಹಿತ ಬಾಳೆಹಣ್ಣು ಬೀರಿ ಹರಕೆ ತೀರಿಸಿದರು.
ರಥೋತ್ಸವದಲ್ಲಿ ಅಪಾರ ಭಕ್ತರು ಆಗಮಿಸಿದ್ದು ಸಂಭ್ರಮದ ವಾತಾವರಣವನ್ನು ಇಮ್ಮಡಿಗೊಳಿಸಿತು.
ದೇವರಿಗೆ ತೂಗುಯ್ಯಲೆ ಸೇವೆ: ರಥೋತ್ಸವಕ್ಕೂ ಮುನ್ನ ವಿವಿಧ ಸಮುದಾಯಗಳ ಅರವಟಿಕೆಗಳ ಬಳಿ ತೆರಳಿದ ಪೂಜೆ ಸಲ್ಲಿಸಿದ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿರುವ ತೂಗುಯ್ಯಲೆಯಲ್ಲಿರಿಸಿ, ಚಾಮರ ಬೀಸಿ ತೂಗಿದ ಬಳಿಕ ರಥದಲ್ಲಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತರಿಗೆ ವಿವಿಧ ಸಮುದಾಯದಿಂದ ಅರವಟಿಕೆ ಹಾಕಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು. ಹಾಗೆಯೇ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ತಹಸೀಲ್ದಾರ್ ಕೆ.ಮಂಜುನಾಥ್, ರಾಜಸ್ವ ನಿರೀಕ್ಷಕ ಅಶ್ವತ್ಥ್, ಮುಖಂಡ ಕೋಡಪ್ಪನಹಳ್ಳಿ ವೆಂಕಟೇಶ್, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ರಂಗನಾಥ್ ದೇವರ ದರ್ಶನ ಪಡೆದರು. ತಾಪಂ ಮಾಜಿ ಸದಸ್ಯ ವರದನಾರಾಯಣ, ಗ್ರಾಪಂ ಮಾಜಿ ಉಪಾಧ್ಯಕ್ಷ ನರಸಿಂಹಮೂರ್ತಿ, ಮಾಜಿ ಸದಸ್ಯ ಜಿ.ಉಮೇಶ್‌ಗೌಡ, ಮುಖಂಡರಾದ ಶ್ರೀನಿವಾಸ್, ಹನುಮಂತರಾಜು, ಸ್ಟೂಡಿಯೋ ಮಂಜುನಾಥ್, ಗರುಡಾದ್ರಿ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.