

ಶ್ರೀರಂಗಪಟ್ಟಣ: ತಾಲೂಕಿನ ಕೊಡಿಯಾಲ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವರ ಬ್ರಹ್ಮರಥೋತ್ಸವ ಗುರುವಾರ ಸಾವಿರಾರು ಭಕ್ತಎ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ದೇವಾಲಯದಲ್ಲಿ ಗುರುವಾರ ಮುಂಜಾನೆಯಿಂದ ವೈದಿಕರಿಂದ ವಿಶೇಷ ಪೂಜೆ ಸಂಪ್ರದಾಯ ಆಚರಣೆಗಳು ನಡೆದು, ಬಳಿಕ ಬ್ರಹ್ಮರಥದಲ್ಲಿ ದೇವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಾಲಯದ ಮುಂಭಾಗದಲ್ಲಿ ಸರ್ವಾಲಂಕೃತಗೊಂಡಿದ್ದ ರಥಕ್ಕೆ ಮಧ್ಯಾಹ್ನ 12.50ಕ್ಕೆ ಸಲ್ಲುವ ಶುಭಲಗ್ನದಲ್ಲಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ವಿ.ರಾಮಕೃಷ್ಣಯ್ಯ ಹಾಗೂ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು.
ಬಳಿಕ ದೇವಾಲಯದ ಸುತ್ತಲು ಶ್ರೀ ನಾರಾಯಣಸ್ವಾಮಿಯ ದಿವ್ಯರಥವನ್ನು ಪದ್ಮಶಾಲಿ ಸಮುದಾಯದವರು ಜನರೊಂದಿಗೆ ಭಕ್ತಿ ಭಾವದಿಂದ ಎಳೆದರು. ಈ ವೇಳೆ ನಾರಾಯಣ, ಗೋವಿಂದ, ಮಹಾವಿಷ್ಣು ಜಯಘೋಷಗಳು ಮೊಳಗಿದವು.
ಕೊಡಿಯಾಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ತಡಗವಾಡಿ, ದೊಡ್ಡಹಾರೋಹಳ್ಳಿ, ಚಿಕ್ಕಹಾರೋಹಳ್ಳಿ, ಅರಕೆರೆ, ಪೀಹಳ್ಳಿ, ಗರ್ಕಹಳ್ಳಿ, ಮಾರಸಿಂಗನಹಳ್ಳಿ ಗ್ರಾಮಗಳ ಸಾವಿರಾರು ಗ್ರಾಮಸ್ಥರು ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು, ತುಮಕೂರು ಹಾಗೂ ಕೋಲಾರದಿಂದಲೂ ಭಕ್ತರು ಆಗಮಿಸಿದ್ದರು. ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ ಕೋಸಂಬರಿ ಅನ್ನ ಪ್ರಸಾದ ವಿತರಣೆ ನಡೆಯಿತು.