

ಹೊಳೆನರಸೀಪುರ: ಪಟ್ಟಣದ ಆರಾಧ್ಯ ದೈವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಮಾ.13ರಂದು ನಡೆಯುವ ಹಿನ್ನೆಲೆಯಲ್ಲಿ ಗುರುವಾರದಿಂದ ವೈಖಾನಸ ಆಗಮೋಕ್ತ ಕಲಾಪಗಳು ಪ್ರಾರಂಭಗೊಂಡಿವೆ.
ಭಕ್ತಿ, ಧರ್ಮ, ಆಧ್ಯಾತ್ಮ, ವೈರಾಗ್ಯಗಳ ತಪೋನಿಧಿಯಾಗಿ, ಪುಣ್ಯ ಪುರುಷರನೇಕರ ಜನ್ಮ ಸ್ಥಾನ ಮತ್ತು ತತ್ವ ಪ್ರತಿಪಾದನಾ ಕ್ಷೇತ್ರವಾಗಿ, ವಶಿಷ್ಠ ಮಹಾಋಷಿಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಪ್ರತ್ಯಕ್ಷವಾದ ಸ್ಥಳವೆಂದು ಖ್ಯಾತಿ ಪಡೆದಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಮತ್ತು ಭಕ್ತಿವರ್ಧನ ಕ್ಷೇತ್ರದ ದೇವಾಲಯದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ, ಶ್ರೀ ನಾರಾಯಣಸ್ವಾಮಿ, ಶ್ರೀ ಲಕ್ಷ್ಮೀದೇವಿ ಶ್ರೀಮತೈ ಗೋಧಾದೇವಿ ಆಂಡಾಳ್‌ದೇವಿ ಅಮ್ಮನವರ್, ಶ್ರೀ ಸುಬ್ರಮಣ್ಯ, ಶ್ರೀ ಚಿಕ್ಕಿನುಂಡೆ, ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಆಳ್ವಾರ್ ಸ್ವಾಮಿಗಳ ಗುಡಿ ಹೊಂದಿರುದ ವಿಶಾಲವಾದ ದೇವಾಲಯವು ಹಲವು ವಿಶ್ಮಯಗಳನ್ನು ಒಳಗೊಂಡಿದೆ.
ಬ್ರಹ್ಮ ರಥೋತ್ಸವ ದಿನದಂದು ಸಂತಾನ ಪ್ರಾಪ್ತಿಗಾಗಿ ರಥೋತ್ಸವಕ್ಕೂ ಮುನ್ನ ರಥಪಿಂಡ ಪ್ರಸಾದವನ್ನು ನೀಡುವ ಪದ್ಧತಿಯನ್ನು ಪೂರ್ವಿಕರು ರೂಢಿಸಿಕೊಂಡು ಬಂದಿದ್ದ ಆಚರಣೆಯನ್ನು ಇಂದಿಗೂ ಪಾಲನೆ ಮಾಡಲಾಗುತ್ತಿದೆ. ಸಂತಾನ ಪಡೆದ ಸುಮಂಗಲಿಯರು ಪೂಜಾ ಮಹೋತ್ಸವದಲ್ಲಿ ಭಾಗಿಯಾಗುತ್ತಾರೆ ಮತ್ತು ಮಾ. 11ರ ತನಕ ರಥಪಿಂಡ ಪ್ರಸಾದಕ್ಕಾಗಿ ಹೆಸರುಗಳನ್ನು ನೋಂದಣಿ ಮಾಡಲಾಗುತ್ತದೆ.
ಮಾ.6 ರಿಂದ ಪ್ರತಿನಿತ್ಯ ಅಭಿಷೇಕ ಹಾಗೂ ವಿಶೇಷ ಉತ್ಸವಗಳು ಪ್ರಾರಂಭಗೊಂಡಿದ್ದು, ಮಾ.7ರಂದು ಧ್ವಜಾರೋಹಣ ರಾತ್ರಿ ಕಲ್ಯಾಣೋತ್ಸವ, ಮಾ. 8 ಶನಿವಾರ ಪಲ್ಲಕ್ಕಿ ಉತ್ಸವ ಸಂಜೆ ಧೂಳೋತ್ಸವ ಹಾಗೂ ಸಿಂಹವಾಹನೋತ್ಸವ ನಡೆಯಿತು. ಮಾ.9ರಂದು ಧೂಳೋತ್ಸವ ಸಂಜೆ ಶೇಷ ವಾಹನೋತ್ಸವ, ಮಾ.10 ರಂದು ಸಂಜೆ ಪುಷ್ಪಮಂಟಪೋತ್ಸವ ಸಂಜೆ ಪ್ರಹ್ಲಾದ ಪರಿಪಾಲನೋತ್ಸವ, ರಾತ್ರಿ 11 ಗಂಟೆಯಿಂದ ಕಡುವಿನಕೋಟೆ ಗ್ರಾಮಸ್ಥರ ವೈಭವದ ದೊಡ್ಡಗರುಡೋತ್ಸವ ಹಾಗೂ ಮಾ. 12 ರಂದು ರಾತ್ರಿ ಗಜೇಂದ್ರ ಮೋಕ್ಷ ಪೂಜಾ ಮಹೋತ್ಸವ ನಡೆಯಲಿದೆ. ಮಾ.13 ರಂದು ವೈಭವದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯವರ ಬ್ರಹ್ಮರಥೋತ್ಸವ ರಾತ್ರಿ ಶಾಂತೋತ್ಸವ ನಡೆಯಲಿದೆ. ಮಾ.14 ರ ಶುಕ್ರವಾರ ಡೋಲೋತ್ಸವ, ಮೃಗಯಾನೋತ್ಸವ, ಅಶ್ವರೋಹಣೋತ್ಸವ, ಶಯನೋತ್ಸವ, ಮಾ.15 ರ ಶನಿವಾರ ಬೆಳಗ್ಗೆ ತೀರ್ಥಸ್ನಾನ(ಅವಭೃತ) ರಾತ್ರಿ ಪೂರ್ಣಾಹುತಿ, ಧ್ವಜಾ ಅವರೋಹಣ, ದೇವತಾ ಉಧ್ವಾಸನ ಪೂಜಾ ಕೈಂಕರ್ಯಗಳು ನಡೆಯಲಿದೆ.