

ಸೊರಬ: ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ ದೇಗುಲಕ್ಕೆ ಆಗಮಿಸಿದ ಮಹಿಳೆಯರಿಗೆ ವರಮಹಾಲಕ್ಷ್ಮೀ ವ್ರತ ಆಚರಣೆ ಅಂಗವಾಗಿ ಪ್ರಸಾದದ ರೂಪದಲ್ಲಿ ಅರಿಷಿಣ, ಕುಂಕುಮ, ಹಸಿರು ಬಳೆಗಳನ್ನು ನೀಡಿ ಉಡಿ ತುಂಬಲಾಯಿತು. ಜತೆಗೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಶ್ರಾವಣ ಮಾಸದ ಶುಕ್ರವಾರ ಹಿನ್ನೆಲೆಯಲ್ಲಿ ಶ್ರೀ ರೇಣುಕಾಂಬ ದೇವಿ ದರ್ಶನಕ್ಕೆ ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ದಾವಣಗೆರೆ, ಹರಿಹರ, ಹಾನಗಲ್, ಬೆಳಗಾವಿ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ದೇವಸ್ಥಾನದ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ದೇವಸ್ಥಾನದ ಕಾರ್ಯನಿರ್ವಾಹಣಾಕಾರಿ ಪ್ರಮೀಳಾ ಕುಮಾರಿ, ಗ್ರಾಪಂ ಅಧ್ಯಕ್ಷೆ ಸರಿತಾ, ಉಪಾಧ್ಯಕ್ಷ ಎಂ.ಬಿ.ರೇಣುಕಾ ಪ್ರಸಾದ್ ಇದ್ದರು.