

ಹೊಳೆನರಸೀಪುರ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ 1008 ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು ಹಾಗೂ ಶ್ರೀ 1008 ವಿದ್ಯಾರಾಜೇಶ್ವರ ತೀರ್ಥಶ್ರೀಪಾದಂಗಳವರ ಸಂಕಲ್ಪದಂತೆ ಮೂರು ದಿನಗಳ ಪೂಜಾ ಮಹೋತ್ಸವ ಆರಾಧನೆ ವೈಭವದಿಂದ ಜರುಗಿತು.
ಶ್ರಾವಣ ಮಾಸದ ಕೃಷ್ಣ ಪಕ್ಷದ ಬಿದಿಗೆ ದಿನವಾದ ಸೋಮವಾರ ಬ್ರಾಹ್ಮಿ ಮುಹೂರ್ತದಲ್ಲಿ ಸುಪ್ರಭಾತ ಸೇವೆ, 108 ಲೀಟರ್ ಹಾಲಿನ ಅಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ನೆರವೇರಿಸಲಾಯಿತು. ಸರ್ವಾಲಂಕೃತ ರಥದಲ್ಲಿ ರಾಯರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಶ್ರೀ ಮಠದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಕೋಟೆ ರಾಜಬೀದಿಯಲ್ಲಿ ರಥೋತ್ಸವ ವೈಭವದಿಂದ ಜರುಗಿತು.
ಮಠದಲ್ಲಿ ಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಮಹಿಳಾ ಹರಿದಾಸ ಸಂಘದ ಮಹಿಳೆಯರು ರಥೋತ್ಸವದಲ್ಲಿ ಕೀರ್ತನೆಗಳನ್ನು ಹಾಡುತ್ತಾ ಸಾಗಿದರು. ಉಡುಪಿಯ ಬಾಲಕೃಷ್ಣಭಟ್ ನೇತೃತ್ವದಲ್ಲಿ ತಂಡದವರು ಚಂಡೆವಾದನ, ಮಂಗಳವಾದ್ಯ ನುಡಿಸಿದರು.
ಶ್ರೀ ರಾಘವೇಂದ್ರ ಮಠದ ಆಡಳಿತಾಧಿಕಾರಿ ಶ್ರೀಷಾಚಾರ್, ಶಶಾಂಕ್ ಪುತ್ತೂರಾಯ, ಕುಲಕರ್ಣಿ, ರಮೇಶ್ ಐತಾಳ್, ಗುರುಪ್ರಸಾದ್, ಪವನ್, ಆನಂದತೀರ್ಥ, ನರೇಂದ್ರ, ಶ್ರೀನಿವಾಸ್, ರಮೇಶ್ ಭಟ್ಟರು, ಶಂಕರ ನಾರಾಯಣ ಐತಾಳ್, ಎನ್.ಆರ್.ಪ್ರಸನ್ನ ಕುಮಾರ್, ಬಿ.ವಿ.ಮುರಳೀಧರ ಇದ್ದರು.