

ಅರಕಲಗೂಡು: ತಾಲೂಕಿನ ಹರದೂರುಪುರ ಬೆಟ್ಟದ ಮೇಲೆ ನೆಲೆಸಿರುವ ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ಜಾತ್ರಾ ರಥೋತ್ಸವದ ಶನಿವಾರ ಸಡಗರ ಸಂಭ್ರಮಗಳಿಂದ ನೆರವೇರಿತು.
ದೇವಸ್ಥಾನದಲ್ಲಿ ದೇವರ ಮೂಲ ವಿಗ್ರಹಕ್ಕೆ ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ, ಬೆಳಗ್ಗೆ ವಿಶೇಷ ಪೂಜಾ ವಿಧಾನಗಳನ್ನು ವಿಧಿವತ್ತಾಗಿ ಪೂರೈಸಲಾಯಿತು.
ಬೆಟ್ಟದ ಮೇಲಿಂದ ದೇವರ ಸ್ಮರಣೆ ಮಾಡುತ್ತಾ ಭಕ್ತರು ಉತ್ಸವ ಮೂರ್ತಿಯನ್ನು ತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಭಕ್ತರ ಜಯ ಘೋಷಗಳ ನಡುವೆ ತೇರು ಎಳೆಯಲಾಯಿತು. ಚಲಿಸುತ್ತಿದ್ದ ರಥಕ್ಕೆ ಭಕ್ತರು ಹಣ್ಣ ಧವನ ಎಸೆದರು.
ಜಾತ್ರೆ ನಿಮಿತ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಸುತ್ತಮುತ್ತಲಿನ ಊರುಗಳ ಜನರು ರಥೋತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಬೆಟ್ಟದ ಮೆಟ್ಟಲುಗಳನ್ನು ಏರಿ ಭಕ್ತರು ದೇವರ ದರ್ಶನ ಪಡೆದು ಭಕ್ತಿ ಭಾವ ಪ್ರದರ್ಶಿಸಿದರು. ದಿನವಿಡೀ ಜಾತ್ರೆಯ ಸಡಗರ ಜೋರಾಗಿತ್ತು.
ಶಾಸಕರಾದ ಎಚ್.ಡಿ. ರೇವಣ್ಣ, ಎ.ಟಿ. ರಾಮಸ್ವಾಮಿ, ಮಾಜಿ ಸಚಿವ ಎ. ಮಂಜು, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ, ಬಿಜೆಪಿ ಮುಖಂಡ ಯೋಗಾ ರಮೇಶ್ ಇತರರು ಪಾಲ್ಗೊಂಡಿದ್ದರು.