

ರಾಯಚೂರು: ಮಂತ್ರಾಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಶ್ರೀ ಮೂಲರಾಮ ನಿಲಯ ವಸತಿ ಗೃಹವನ್ನು ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಸೋಮವಾರ ಉದ್ಘಾಟಿಸಿದರು.
ಬೆಂಗಳೂರು ಮೂಲದ ರಾಯರ ಪರಮ ಭಕ್ತರ ಉದ್ಯಮಿ ಸೋಮಶೇಖರ 12 ಕೋಟಿ ರೂ. ವೆಚ್ಚದಲ್ಲಿ 102 ಕೊಠಡಿಗಳ ವಸತಿ ನಿಲಯವನ್ನು ನಿರ್ಮಾಣ ಮಾಡುವ ಮೂಲಕ ರಾಯರ ಸೇವೆಗೆ ಮುಂದಾಗಿದ್ದಾರೆ. ಕರೋನಾ ಸಂದರ್ಭದಲ್ಲಿ ಆರಂಭವಾದ ವಸತಿಗೃಹದ ನಿರ್ಮಾಣ ಕಾರ್ಯ ಆರಾಧನೆ ಹತ್ತಿರವಿರುವಾಗ ಪೂರ್ಣಗೊಂಡಿದೆ.
ರಾಯರ ಭಕ್ತರು ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೆಲವರು ಒಂದೆರಡು ಕೊಠಡಿ ನಿರ್ಮಾಣಕ್ಕೆ ದೇಣಿಗೆ ನೀಡಿದರೆ ಸೋಮಶೇಖರ ವಸತಿ ಗೃಹವನ್ನು ತಾವೊಬ್ಬರೆ ನಿರ್ಮಾಣ ಮಾಡುವುದಾಗಿ ಮುಂದೆ ಬಂದು ಅದನ್ನು ಪೂರ್ಣಗೊಳಿಸಿ ಶ್ರೀಮಠಕ್ಕೆ ಹಸ್ತಾಂತರಿಸಿದ್ದಾರೆ.
ಶ್ರೀಮಠದ ಪಂಡಿತರು ಸೋಮವಾರ ಪೂಜಾ ವಿವಿಧಾನಗಳನ್ನು ನೆರವೇರಿಸಿದರೆ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಉದ್ಘಾಟನೆ ನೆರವೇರಿಸಿ ದಾನಿಗಳಾದ ಸೋಮಶೇಖರ ಮತ್ತು ಕುಟುಂಬ ವರ್ಗದವರನ್ನು ಸನ್ಮಾನಿಸಿ, ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಆಡಳಿತಾಕಾರಿ ಎನ್.ಮಾಧವಶೆಟ್ಟಿ, ದಾನಿ ಸೋಮಶೇಖರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.