

ಸರಗೂರು: ಪಟ್ಟಣದ ಬಿಡುಗಲು ಗ್ರಾಮದಲ್ಲಿರುವ ಶ್ರೀ ಮುಳ್ಳೂರು ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವವು ವಿಜೃಂಭಣೆಯಿಂದ ಮಂಗಳವಾರ ನೆರವೇರಿತು.
ಪಡುವಲು ವಿರಕ್ತ ಮಠ ಅಧ್ಯಕ್ಷರಾದ ಶ್ರೀ ಮಹದೇವಸ್ವಾಮಿ ಅವರ ಸಮ್ಮುಖದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ದೇವಸ್ಥಾನಕ್ಕೆ ತಳಿರು ತೋರಣಗಳಿಂದ ವಿದ್ಯುತ್ ದೀಪಾಲಂಕಾರ ಮಾಡಲಾಯಿತು. ಬೆಳಗಿನ ಜಾವ ನವಗ್ರಹ ಪೂಜೆ, ಹೋಮ ರುದ್ರಭಿಷೇಕ ತುಳಸಿ ಅರ್ಚನೆ, ಕುಂಕುಮಾರ್ಚನೆ ಸೇರಿದಂತೆ ಹಲವು ಪೂಹಾ ಕೈಂಕರ್ಯಗಳು ನಡೆಸಲಾಯಿತು.
ಹೂವಿನಿಂದ ಅಲಂಕೃತಗೊಂಡ ರಥದ ಮೇಲೆ ದೇವಿಯ ಉತ್ಸವ ಮೂರ್ತಿಯನ್ನು ಕೂರಿಸಿ ವಿಧಿ ವಿಧಾನಗಳಿಂದ ಪೂಜಿಸಿ ನಂತರ ಕಪಿಲ ನದಿ ಬಳಿಗೆ ಕರೆ ತಂದು ಗಂಗೆ ಪೂಜೆ ಸಲ್ಲಿಸಲಾಯಿತು. ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮಂಗಳವಾದ್ಯ, ವೀರಗಾಸೆ, ನಂದಿ ಧ್ವಜ, ಸತ್ತಿಗೆ ಕಲಾ ತಂಡಗಳ ಜತೆಯಲ್ಲಿ ಮೆರವಣಿಗೆ ನಡೆಯಿತು.
ಉತ್ಸವ ಮೂರ್ತಿ ದೇವಸ್ಥಾನದ ಬಳಿಗೆ ಬಂದ ಕೂಡಲೇ ದೇಗುಲದ ಸುತ್ತ ಪ್ರದಕ್ಷಣೆ ಹಾಕಲಾಯಿತು. ನಂತರ ಕೊಂಡೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಕೊಂಡೋತ್ಸವವನ್ನು ಭಕ್ತರು ಕಣ್ಣು ತುಂಬಿಸಿ ಕೊಂಡು ದೇವಿ ಕೃಪೆಗೆ ಪಾತ್ರರಾದರು. ಭಕ್ತರಿಗೆ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.
ಯಜಮಾನರು ಪಾಪಣ್ಣ ಬಳಗದ ಅಧ್ಯಕ್ಷ ಆಯಿಲ್ ಶ್ರೀಕಂಠಸ್ವಾಮಿ, ಶಿವಕುಮಾರ್, ಶ್ರೀರಾಮುಲು, ಶ್ರೀಕಂಠ ಸ್ವಾಮಿ, ಪ ಪಂ ಸದಸ್ಯ ಚಲುವಕೃಷ್ಣ ಹಾಗೂ ಮುಖಂಡರು, ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.