

ಮದ್ದೂರು: ತಾಲೂಕಿನ ಗೊರವನಹಳ್ಳಿಯಲ್ಲಿ ಬುಧವಾರ ಶ್ರೀ ಮಾರಮ್ಮ ದೇವಿಯ ಕೊಂಡೋತ್ಸವ ಸಂಭ್ರಮದಿಂದ ನಡೆಯಿತು.
ಜಾತ್ರಾ ಮಹೋತ್ಸವವದ ಅಂಗವಾಗಿ ಮಂಗಳವಾರ ರಾತ್ರಿ ಬಂಡಿ ಉತ್ಸವವು ನಡೆಯಿತು. ಇದರ ಅಂಗವಾಗಿ ಎತ್ತಿನ ಗಾಡಿಗಳನ್ನು ಅಲಂಕರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಅದರಲ್ಲಿ ಕೊಂಡಕ್ಕೆ ಸೌದೆಗಳನ್ನು ಕೊಂಡೊಯ್ಯಲಾಯಿತು.
ಬುಧವಾರ ಮುಂಜಾನೆಯೇ ಗ್ರಾಮದ ಆರಂಭದಲ್ಲೇ ಇರುವ ದೇವಸ್ಥಾನದ ಮುಂದೆ ಕೊಂಡೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಗರ್ಭಗುಡಿಯಲ್ಲಿರುವ ದೇವಿಯವರ ವಿಗ್ರಹಕ್ಕೆ ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.
ಗ್ರಾಮದ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು. ಗ್ರಾಮದ ರಸ್ತೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ರಾತ್ರಿ ದೇವಿಯವರ ಮೆರವಣಿಗೆ ಕಾರ್ಯಕ್ರಮವು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ದೇವಸ್ಥಾನವನ್ನು ಹೂವುಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು, ದೇವಸ್ಥಾನದ ಅರ್ಚಕರಾದ ಪುಟ್ಟಸ್ವಾಮಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.