

ಕಂಪ್ಲಿ: ಪಟ್ಟಣದ ಕೋಟೆ ಪ್ರದೇಶದ ಬಳಿ ತುಂಗಭದ್ರಾ ನದಿ ತಟದಲ್ಲಿ ಮಂತ್ರಾಲಯ ಮಠದ ಪರಂಪರೆಯ ಯತಿಗಳಾದ ಶ್ರೀ ಮಾಧವತೀರ್ಥರ ಮೂಲ ಬೃಂದಾವನದಲ್ಲಿ ಮಧ್ಯಾರಾಧನೆ ಭಾನುವಾರ ನಡೆಯಿತು.
ಶ್ರೀ ಮಾಧವತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ನೈವೇದ್ಯ, ಹಸ್ತೋದಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು. ಮಂತ್ರಾಲಯ ವಿದ್ಯಾಪೀಠದ ಉಪನ್ಯಾಸಕ ದ್ವಾರಕನಾಥಾಚಾರ್ ಶ್ರೀ ಮಾಧವತೀರ್ಥರ ಕುರಿತು ಉಪನ್ಯಾಸ ನೀಡಿ, 13ನೇ ಶತಮಾನದಲ್ಲಿ ಗೋವಿಂದ ಶಾಸ್ತ್ರಿಗಳು ಮಧ್ವಾಚಾರ್ಯರ ನೇರ ಶಿಷ್ಯರಾಗಿ ಮಾಧವತೀರ್ಥರೆನಿಸಿಕೊಂಡರು. 17ವರ್ಷಗಳ ಕಾಲ ಸರ್ವಜ್ಞ ಪೀಠದಲ್ಲಿದ್ದು, ಅವರ ಕೃತಿಗಳು ಲಭ್ಯವಾಗಿಲ್ಲ ಎಂದರು.
ಅಕ್ಷೋಭ್ಯತೀರ್ಥರಿಗೆ ಸಂಸ್ಥಾನದ ಅಧಿಪತ್ಯ ಕೊಟ್ಟಿದ್ದಲ್ಲದೆ, ಮಧುಹರಿ ತೀರ್ಥರನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ಆಚಾರ್ಯರಿಂದ ಪ್ರದತ್ತವಾಗಿದ್ದ ವೀರರಾಮನ ವಿಗ್ರಹವನ್ನು ದಯಪಾಲಿಸಿದರು. ಮಾಧವತೀರ್ಥರು ನಾಲ್ಕು ವೇದಗಳನ್ನು ಅಧ್ಯಯನ ಮಾಡಿದ್ದರು. ವಿಕೃತಿನಾಮ ಸಂವತ್ಸರದ ಭಾದ್ರಪದ ಬಹುಳ ಅಮಾವಾಸ್ಯೆಯಂದು ಕಂಪ್ಲಿಯ ತುಂಗಭದ್ರಾ ನದಿ ತೀರದಲ್ಲಿ ಮಧವತೀರ್ಥರು ಬೃಂದಾವನಸ್ಥರಾದರು ಎಂದು ಹೇಳಿದರು.
ಮಾಧವತೀರ್ಥರ ಮೂಲಬೃಂದಾವನವನ್ನು ಕವಚ, ಫಲ-ಪುಷ್ಪ, ತುಳಸಿಮಾಲೆ, ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾಯರ ಮಠದ ವ್ಯವಸ್ಥಾಪಕ ಪುರುಷೋತ್ತಮ, ಅರ್ಚಕ ಸುಧೀಂದ್ರ ಜೋಷಿ, ಗುರುರಾಜ ಸೇವಾಮಂಡಳಿ ಪ್ರಮುಖ ಡಿ.ಗುರುರಾಜಾಚಾರ್, ಹೊಸಪೇಟೆ ಮಠದ ವ್ಯವಸ್ಥಾಪಕ ಗುರುರಾಜ ದಿಗ್ಗಾವಿ, ದಿಗ್ಗಾವಿ ವೇಣುಗೋಪಾಲಾಚಾರ್, ನಾಗರಾಜ ಜೋಷಿ, ವಾದಿರಾಜಾಚಾರ್, ಜಗದೀಶ ಜಿ.ರಾಯ್ಕರ್, ರಾಘವೇಂದ್ರ ಜೋಷಿ, ರಾಮಕೃಷ್ಣ ಜಾಗೀರದಾರ್, ಪ್ರಭಾಕರ, ಆನಂದ್ ರಾವ್, ಸತ್ಯನಾರಾಯಣ ಮಹಿಳಾ ಭಜನಾ ಮಂಡಳಿ ಸದಸ್ಯರು, ಭಕ್ತರು ಇದ್ದರು.