

ಶೃಂಗೇರಿ: ನವರಾತ್ರಿ ಮಹೋತ್ಸವ ಸಲುವಾಗಿ ಶುಕ್ರವಾರ ಶ್ರೀಮಠದಲ್ಲಿ ಶ್ರೀ ಶಾರದೆ ವೈಷ್ಣವಿಯಾಗಿ ಕಂಗೊಳಿಸಿದಳು. ಜಗನ್ಮಾತೆ ಶಂಖ, ಚಕ್ರ, ಗದೆ ಮೊದಲಾದ ಆಯುಧಗಳನ್ನು ಹಿಡಿದು, ಗರುಡನನ್ನು ಆರೋಹಿಸಿ ಶ್ರೀ ಮಹಾವಿಷ್ಣುವಿನ ಶಕ್ತಿಯಾಗಿ ಭಕ್ತ ಸಮೂಹವನ್ನು ಅನುಗ್ರಹಿಸಿದಳು.
ಮಠದಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಹಾಗೂ ದುರ್ಗಾಸಪ್ತಶತಿ, ಲಕ್ಷ್ಮೀನಾರಾಯಣ ಹೃದಯ, ಸೂತಸಂಹಿತೆ ಪಾರಾಯಣಗಳು ನಡೆದವು. ಸೂರ್ಯ ನಮಸ್ಕಾರ, ಶ್ರೀಸೂಕ್ತ ಜಪ, ದುರ್ಗಾಜಪ, ಭುವನೇಶ್ವರಿ ಜಪ ನೆರವೇರಿದವು. ಸುವಾಸಿನೀ ಹಾಗೂ ಕುಮಾರೀಪೂಜೆ ಜರುಗಿತು. ಜಗದ್ಗುರುಗಳು ಶ್ರೀ ಶಾರದಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಪ್ರವಚನಮಂದಿರದಲ್ಲಿ ಯತಿವರ್ಯರ ಸಮ್ಮುಖದಲ್ಲಿ ಶ್ರೀ ಶಾರದೆಗೆ ಡೋಲೋತ್ಸವ ನೆರವೇರಿತು. ಬಳಿಕ ಶ್ರೂ ಚಂದ್ರಮೌಳೀಶ್ವರರಿಗೆ ವಿಶೇಷ ಪೂಜೆ ನೆರವೇರಿತು.
ಬೀದಿ ಉತ್ಸವದಲ್ಲಿ ಧರೇಕೊಪ್ಪ ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಭಾಗವಹಿಸಿದ್ದರು. ಹೊಳೆಕೊಪ್ಪ ಶ್ರೀ ರಾಮ ಸೇವಾ ಸಮಿತಿ, ಶ್ರೀ ಮಲ್ಲಿಕಾರ್ಜುನ ಸೇವಾ ಸಮಿತಿ, ಶ್ರೀ ಬ್ರಹ್ಮಲಿಂಗೇಶ್ವರ ಸೇವಾ ಸಮಿತಿ, ತಾಲೂಕು ಮರಾಠಿ ಸೇವಾ ಸಂಘ, ಕೆಸರುಕುಡಿಗೆ, ಹಂಚರಿಕೆ ಜಾನಪದ ತಂಡಗಳು, ಹೊಳೆಕೊಪ್ಪ ಶ್ರೀರಾಮ ಯುವರೈತ ಸಂಘ, ವರಸಿದ್ಧಿ ವಿನಾಯಕ ಸೇವಾ ಸಮಿತಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಭಾಗಿಯಾಗಿದ್ದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಿರುನಲ್ವೇಲಿ ಆಯಿಕುಡಿ ಕುಮಾರ್ ಮತ್ತು ವೃಂದದಿಂದ ನಾಮಸಂಕೀರ್ತನೆ ಜರುಗಿತು.
ಮಠದ ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಕಿರೀಟ, ಆಭರಣಗಳನ್ನು ಧರಿಸಿ ಶ್ರೀ ಶಾರದಾ ದೇವಾಲಯಕ್ಕೆ ಉತ್ಸವದಲ್ಲಿ ಆಗಮಿಸಿದರು. ಯತಿವರ್ಯರು ದೇವಾಲಯ ಪ್ರವೇಶಿಸಿದ ಬಳಿಕ ಬಂಗಾರರಥದಲ್ಲಿ ಶ್ರೀ ಶಾರದೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಘೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ಸಪ್ತಶತಿ ಪಾರಾಯಣ, ಜಗನ್ಮಾತೆಗೆ ಮಹಾಮಂಗಳಾರತಿ, ವೇದಗಳ ಪಾರಾಯಣ, ಸರ್ವಸಂಗೀತ ಹಾಗೂ ವಾದ್ಯ ಸೇವೆ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ವಿಧಿಗಳು ನೆರವೇರಿದವು.