

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶಕ್ತಿ ದೇವತೆ ಶ್ರೀ ಮದ್ದೂರಮ್ಮನವರ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಮೇ 20 ವರೆಗೆ ಅದ್ದೂರಿಯಾಗಿ ಜರುಗಲಿದೆ.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಶ್ರೀ ಮದ್ದೂರಮ್ಮನ ಸಹಸ್ರಾರು ಸಂಖ್ಯೆಯ ಭಕ್ತರು ಇದ್ದು, ಒಂದು ವಾರಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 17ರಂದು ನಡೆಯುವ ಕೊಂಡೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ಮೇ 16ರಂದು ಬೆಳಗ್ಗೆ 10.30 ಗಂಟೆಗೆ ಶ್ರೀ ಮದ್ದೂರಮ್ಮ ಮಠಮನೆ ದೇವಸ್ಥಾನದಲ್ಲಿ ಹೋಮ, ಹವನ, 2.30ಕ್ಕೆ ಶ್ರೀ ಎಲ್ಲಮ್ಮ ದೇವಿಗೆ ಚಂದ್ರಭಂಡಾರ ಸೇವೆ, ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಕೊಂಡ ಬಂಡಿ ಉತ್ಸವ, ಪ್ರಮುಖ ಬೀದಿಗಳಲ್ಲಿ ಸಂಜೆ 6.30ಕ್ಕೆ ಶ್ರೀ ಮದ್ದೂರಮ್ಮನವರ ಮೂಲ ದೇಗುಲದಲ್ಲಿ ಅಭಿಷೇಕ, ಹೋಮ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ರಾತ್ರಿ 11.30ಕ್ಕೆ ಕೊಂಡಕ್ಕೆ ಅಗ್ನಿ ಸ್ಪರ್ಶ ಪೂಜೆ ಮಾಡಲಾಗುವುದು. ರಾತ್ರಿ 1 ಗಂಟೆಗೆ ಮಠಮನೆಯಿಂದ ಮಂಗಳವಾದ್ಯದೊಂದಿಗೆ ಶಿಂಷಾ ನದಿಗೆ ಹೋಗಿ, ನದಿಯ ದಡದಲ್ಲಿ ಶ್ರೀ ಮದ್ದೂರಮ್ಮನವರಿಗೆ 101 ಚಂದ್ರಭಂಡಾರ ಎಡೆ ಪೂಜೆ, ಹೂ ಹೊಂಬಾಳೆ ಪೂಜೆ, ಕರಗ ಪೂಜೆ ಮಾಡಿಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಮಠಮನೆ ತಲುಪಲಿದೆ.
ಮೇ 17ರಂದು ಬೆಳಗ್ಗೆ ಜ್ಯೇಷ್ಠ ನಕ್ಷತ್ರ ಶುಭ ಬ್ರಾಹ್ಮಿ ಮಹೂರ್ತದಲ್ಲಿ ಬೆಳಗ್ಗೆ 6 ಗಂಟೆಗೆ ಶ್ರೀ ಮದ್ದೂರಮ್ಮನವರು ಕೊಂಡ ಪ್ರವೇಶ ಮಾಡುವರು. ಸಂಜೆ 4.30ಕ್ಕೆ ಹೆಣ್ಣು ಮಕ್ಕಳಿಂದ ಶ್ರೀ ಮದ್ದೂರಮ್ಮನಿಗೆ ಹಾಲರವಿ ಸೇವೆ ನಡೆಯಲಿದೆ. ಮೇ 18ರಂದು ಸಂಜೆ 4 ಗಂಟೆಗೆ ಮಠಮನೆಯಿಂದ ಭಕ್ತರ ಬಾಯಿ ಬೀಗ ಸಮೇತ ಶ್ರೀ ಸಿಡಿರಣ್ಣನವರ ಸಿಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಮೇ 19ರಂದು ಸಂಜೆ 4ಕ್ಕೆ ಶ್ರೀ ಮದ್ದೂರಮ್ಮನವರ ಓಕಳಿ ಸೇವೆ, ಸಂಜೆ 6.30ಕ್ಕೆ ಉಯ್ಯಲೆ ಉತ್ಸವ, ರಾತ್ರಿ 9ಕ್ಕೆ ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮೇ 20 ಸಂಜೆ 4ಕ್ಕೆ ಶ್ರೀ ಮದ್ದೂರಮ್ಮನವರಿಗೆ ಎಣ್ಣೆ ಮಜ್ಜನ ಸೇವೆ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ರಾತ್ರಿ 9ಕ್ಕೆ ಮೂಲ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಯೊಂದಿಗೆ ಮಠಮನೆ ತಲುಪುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.