

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶಕ್ತಿ ದೇವತೆ ಶ್ರೀ ಮದ್ದೂರಮ್ಮ ಅವರ ಕೊಂಡೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಬುಧವಾರ ನೆರವೇರಿತು.
ದೇಗುಲದ ಆವರಣದಲ್ಲಿ ಶ್ರವಣ ನಕ್ಷತ್ರ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಕೊಂಡೋತ್ಸವದಲ್ಲಿ ಪ್ರಥಮ ಬಾರಿಗೆ ಅರ್ಚಕ ತೇಜಸ್ ದೇವರ ಪಟ ಹೊತ್ತು ಕೆಂಡದ ಮೇಲೆ ಕೊಂಡ ಹಾಯ್ದಗ ಭಕ್ತರ ಉದ್ಘೋಷ ಮುಗಿಲು ಮುಟ್ಟಿತ್ತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕೊಂಡೋತ್ಸವಕ್ಕೆ ಸಾಕ್ಷಿಯಾದರು.
ಹೆಚ್ಚಿನ ಪ್ರಮಾಣದಲ್ಲಿ ಕೊಂಡೋತ್ಸವಕ್ಕೆ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಕೊಂಡೋತ್ಸವ ನೋಡಲು ಅನುಕೂಲವಾಗುವಂತೆ 2 ಎಲ್‌ಇಡಿ ವಾಲ್‌ಗಳನ್ನು ಹಾಕಲಾಗಿತ್ತು. ಯಾವುದೇ ಅಹಿತಕರ ಘಟನೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೊಂಡೋತ್ಸವ ಮುಗಿದ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಮಠಮನೆಯಿಂದ ಮಂಗಳವಾದ್ಯದೊಂದಿಗೆ ಶಿಂಷಾ ನದಿಗೆ ತೆರಳಿ, ನದಿಯ ದಡದಲ್ಲಿ ಶ್ರೀ ಮದ್ದೂರಮ್ಮನವರಿಗೆ ನೂರೊಂದು ಚಂದ್ರ ಭಂಡಾರ, ಎಡೆಪೂಜೆ, ಹೂ ಹೊಂಬಾಳೆ ಪೂಜೆ, ಕರಗ ಪೂಜೆ ಮಾಡಿಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಮಠಮನೆ ತಲುಪಿತು. ನಂತರ ಮಠಮನೆಯಿಂದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆಯೊಂದಿಗೆ ದೇಗುಲಕ್ಕೆ ಆಗಮಿಸಿತು. ಈ ವೇಳೆ ದಾರಿಯುದ್ದಕ್ಕೂ ಭಕ್ತರು ಮದ್ದೂರಮ್ಮನಿಗೆ ವಿಶೇಷ ಸಲ್ಲಿಸಿದರು.
ಕೊಂಡೋತ್ಸವ ಅಂಗವಾಗಿ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ಹೆಣ್ಣುಮಕ್ಕಳಿಂದ ಶ್ರೀ ಮದ್ದೂರಮ್ಮನವರಿಗೆ ಹಾಲರವಿ ಸೇವೆ ಯಶಸ್ವಿಯಾಗಿ ಜರುಗಿತು.