ಶ್ರೀ ಭಾರತೀ ತೀರ್ಥರ ವರ್ಧಂತಿ ಮಹೋತ್ಸವ

27sri-1 (1) web
Published on

ಶೃಂಗೇರಿ: ಶ್ರೀ ಶಾರದಾ ಪೀಠದ 36ನೇ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ 73ನೇ ವರ್ಧಂತಿ ಮಹೋತ್ಸವ ಸೋಮವಾರ ನೆರವೇರಿತು. ಬೆಳಗ್ಗೆ 7 ಗಂಟೆಗೆ ಹಿರಿಯ ಶ್ರೀಗಳ ದರ್ಶನಕ್ಕಾಗಿ ನರಸಿಂಹವನದ ಗುರುಭವನದಲ್ಲಿ ನಾನಾ ಪ್ರಾಂತಗಳ 3 ಸಾವಿರಕ್ಕೂ ಹೆಚ್ಚು ಭಕ್ತರು ಸರತಿಯಲ್ಲಿ ನಿಂತು ಯತಿವರ್ಯರ ದರ್ಶನ ಪಡೆದರು. ಭಿಕ್ಷಾವಂದನೆ, ಪಾದುಕೆ, ವಸ್ತ್ರ ಸಮರ್ಪಣೆ ಹಾಗೂ ಫಲ, ಪುಷ್ಪಗಳನ್ನು ನೀಡಿದರು.

ಗುರುಭವನದ ಎದುರು ವೈವಿಧ್ಯಮಯ ಚಿತ್ತಾರ ಬಿಡಿಸಿದ ಶ್ವೇತ ಕೊಡೆಗಳು, ವಿದ್ಯುತ್ ಅಲಂಕಾರ ನೋಡುಗರ ಗಮನ ಸೆಳೆದವು. ದರ್ಶನದ ನಂತರ ಮಧ್ಯಾಹ್ನ 11 ಗಂಟೆಗೆ ಶ್ರೀ ಶಾರದಾಂಬೆ ಸನ್ನಿಧಿಯಲ್ಲಿ ಹಿರಿಯ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಮಹಾರುದ್ರಯಾಗದ ಪೂರ್ಣಾಹುತಿ ಮುಂತಾದ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು. ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು. ಯತಿವರ್ಯರ ವರ್ಧಂತಿ ಮಹೋತ್ಸವ ಅಂಗವಾಗಿ ಮಾ.23ರಂದು ಸಹಸ್ರಮೋದಕ ಗಣಪತಿ ಹೋಮ, ಮಹಾರುದ್ರಯಾಗಕ್ಕೆ ಮಹಾಸಂಕಲ್ಪ, 24ರಂದು ಸಹಸ್ರ ಚಂಡಿಕಾ ಮಹಾಯಾಗದ ಸಂಕಲ್ಪ, 26ರ ಮಧ್ಯಾಹ್ನ 11.30ಕ್ಕೆ ಹಿರಿಯ ಶ್ರೀಗಳಿಂದ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ನಡೆದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net