

ಶೃಂಗೇರಿ: ಮಾಘ ಅಮಾವಾಸ್ಯೆ ದಿನವಾದ ಶುಕ್ರವಾರ ಈಶ್ವರಗಿರಿ ಶ್ರೀ ಭವಾನೀಮಲಹಾನಿಕರೇಶ್ವರ ಸ್ವಾಮಿ ಮಹಾರಥೋತ್ಸವ ಜರುಗಿತು. ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥೋತ್ಸವ ನೆರವೇರಿತು.
ಮುಖ್ಯಬೀದಿಯಲ್ಲಿ ಸಾಗಿಬಂದ ಮಹಾರಥೋತ್ಸವಕ್ಕೆ ತಳಿರು ತೋರಣಗಳು, ರಂಗವಲ್ಲಿಗಳು, ಆನೆಗಳು, ಅಶ್ವಗಳು, ಮಠದಛತ್ರಿ-ಚಾಮರಗಳು, ವೇದ, ವಾದ್ಯಗೋಷ್ಠಿಗಳು ಮೆರುಗು ನೀಡಿದವು. ಪಟ್ಟಣದ ನಾಗರಿಕರು ಜಗದ್ಗುರುಗಳಿಗೆ ಫಲ, ತಾಂಬೂಲ ಸಮರ್ಪಿಸಿದರು.
ರಥೋತ್ಸವ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಲಕ್ಷ ಮಲ್ಲಿಕಾರ್ಚಾನೆ ಬಳಿಕ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಹಾನೀರಾಜನ ನೆರವೇರಿತು. ಬಳಿಕ ಸ್ವಾಮಿಯ ಸನ್ನಿಧಿಯಲ್ಲಿ ರಥೋತ್ಸವಕ್ಕೆ ಆಗಮಿಸಬೇಕಾಗಿ ಭಕ್ತರು ಜಗದ್ಗುರುಗಳಲ್ಲಿ ಪ್ರಾರ್ಥನೆ ಮಾಡಿದರು. ಉತ್ಸವಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಮಹಾರಥದಲ್ಲಿ ಇರಿಸಿದ ಬಳಿಕ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರಥದಲ್ಲಿರುವ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿದ ಬಳಿಕ ಉತ್ಸವ ಪ್ರಾರಂಭಗೊಂಡಿತು.
ಶ್ರೀ ಋಷ್ಯಶೃಂಗಮುನಿಗಳ ತಂದೆಯವರಾದ ವಿಭಾಂಡಕ ಮುನಿಗಳ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಶ್ರೀ ಮಲಹಾನಿಕರೇಶ್ವರ ಎಂಬ ಹೆಸರಿನಿಂದ ಈಶ್ವರಗಿರಿಯ ಮೇಲೆ ಲಿಂಗರೂಪದಲ್ಲಿ ಉದ್ಭವಿಸಿದನು. ಅವಿಚ್ಛಿನ್ನ ಗುರುಪರಂಪರೆಯ ಎಲ್ಲ ಜಗದ್ಗುರುಗಳಿಂದ ಪೂಜಿಸಲ್ಪಡುತ್ತಿರುವ ಸಪರಿವಾರ ಶ್ರೀ ಭವಾನೀಮಲಹಾನಿಕರೇಶ್ವರ ಸ್ವಾಮಿಯು ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಬಾಧೆಗಳನ್ನು ನಿವಾರಿಸುತ್ತ ಭಕ್ತರ ಕೋರಿಕೆಯನ್ನು ಈಡೇರಿಸುತ್ತಾನೆ. ಶ್ರೀ ಶಾರದಾಪೀಠದ ಶಿಷ್ಯರಾದ ವಿಜಯನಗರ, ಕೆಳದಿ ಮುಂತಾದ ಸಂಸ್ಥಾನದ ಅರಸರು ಶ್ರೀ ಮಲಹಾನಿಕರೇಶ್ವರ ದೇವಾಲಯಕ್ಕೆ ಅನೇಕ ಗ್ರಾಮಗಳನ್ನು ದತ್ತಿ ಮಾಡಿದ ಕುರಿತು ಉಲ್ಲೇಖವಿದೆ.
ಮಾ.1ರಂದು ಓಕಳಿ ಉತ್ಸವ, ತುಂಗಾ ನದಿಯಲ್ಲಿ ಅವಭೃಥಸ್ನಾನ, ಮಹಾರುದ್ರಯಾಗದ ಪೂರ್ಣಾಹುತಿ, ಸಂಜೆ 6.30ರಿಂದ ಶಾರದಾಂಬಾ ದೇವಾಲಯದಲ್ಲಿ ಸಂಧಾನೋತ್ಸವ, ರಾತ್ರಿ 8 ಗಂಟೆಗೆ ತುಂಗಾ ನದಿಯಲ್ಲಿ ತೆಪ್ಪೋತ್ಸವ, ಧ್ವಜಾರೋಹಣ,ಪ್ರಸಾದವಿನಿಯೋಗ ನಡೆಯಲಿದೆ.