ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಮೊದಲ ಕಾರ್ತಿಕ ಮಂಗಳವಾರದ ಅಂಗವಾಗಿ ದೇವಿಯ ಮೂರ್ತಿಗೆ ವಿವಿಧ ಪುಷ್ಪಾಲಂಕಾರ ಕೈಗೊಂಡು ವಿಶೇಷ ಪೂಜೆ ಸಲ್ಲಿಸಲಾಯಿತು.
ದೇಗುಲದಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ಮೊದಲ ಕಾರ್ತಿಕ ಮಂಗಳವಾರದ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೆಳಗ್ಗೆ ದೇವಿಗೆ ಪನ್ನೀರು, ಎಳನೀರು, ಅರಿಸಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ದೇವಿಯ ಮೂರ್ತಿಯನ್ನು ವೀಳ್ಯದೆಲೆ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಿ ಪಂಚಾಮೃತ ಅಭಿಷೇಕ ಅರ್ಪಿಸಲಾಯಿತು. ದೀಪ, ಧೂಪದಾರತಿಯನ್ನು ನೆರವೇರಿಸಲಾಯಿತು. ಮಹಾ ಮಂಗಳಾರತಿ ಬೆಳಗಿಸಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಪಟ್ಟಣ ಸೇರಿದಂತೆ ಆರ್.ಎಸ್ ದೊಡ್ಡಿ, ಭೈರನತ್ತ, ಉದ್ದನೂರು, ಬೆಳತ್ತೂರು, ಚಿಕ್ಕಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರ ಕಡೆಗಳಿಂದ ಆಗಮಿಸಿದ ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ಪೂಜಾ ಕೈಂಕರ್ಯವನ್ನು ಜಯಂತ್‌ರಾವ್ ಸಿಂಧೆ ನೆರವೇರಿಸಿದರು.