ಶ್ರೀ ಬೆಟ್ಟಳ್ಳಿ ಮಾರಮ್ಮನಿಗೆ ಪೂಜೆ

14 HANUR 2 A
Published on

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಹಾಗೂ ಧನುರ್ಮಾಸ ಸಮಾಪ್ತಿ ಹಿನ್ನೆಲೆ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.

ದೇಗುಲದಲ್ಲಿ ಬೆಳಗಿನ ಜಾವ ದೇವಿಗೆ ಹಾಲು, ಮೊಸರು, ಪನ್ನೀರು, ಎಳನೀರು, ಕುಂಕುಮ, ಜೇನುತುಪ್ಪ ಹಾಗೂ ಗಂಧದ ಅಭಿಷೇಕ ನೆರವೇರಿಸಲಾಯಿತು. ವಿಶೇಷವಾಗಿ ಕುಂಕುಮಾರ್ಚನೆ ಹಾಗೂ ಪುಷ್ಪರ್ಚಾನೆ ಸಲ್ಲಿಸಲಾಯಿತು. ಬಳಿಕ ದೇವಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ, ಪಂಚಾಮೃತ ಅಭಿಷೇಕ ಹಾಗೂ ನೈವೇದ್ಯ ಸಮರ್ಪಿಸಲಾಯಿತು. ಧೂಪದಾರತಿ, ಕೊಬ್ಬರಿ, ಬೆಲ್ಲ, ನಿಂಬೆಹಣ್ಣಿನ ಆರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಲಾಯಿತು. ದೇವರ ದರ್ಶನದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದರು. ಅರ್ಚಕ ಅರುಣ್‌ರಾವ್ ಸಿಂಧೆ, ಜಯಂತ್‌ರಾವ್ ಸಿಂಧೆ ಪೂಜಾ ಕೈಂಕರ್ಯ ನೆರವೇರಿಸಿದರು.

ಕಬ್ಬಿನಿಂದ ವಿಶೇಷ ಅಲಂಕಾರ: ಹಬ್ಬದ ಹಿನ್ನಲೆ ದೇಗುಲವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ದೇವಿಗೆ ಕಬ್ಬಿನ ಅಲಂಕಾರ ಮಾಡಿದ್ದು ಗಮನಸೆಳೆಯಿತು. ಪಟ್ಟಣ ಸೇರಿದಂತೆ ಭೈರನತ್ತ, ಉದ್ದನೂರು, ಚಿಕ್ಕಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಭಕ್ತರು ದೇವಿ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net