ಶ್ರೀ ಬಂಟೇಶ್ವರ ದೇಗುಲ ಉದ್ಘಾಟನೆ

29blrp2
Published on

ಬೇಲೂರು: ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬಂಟೇಶ್ವರ (ಶಿವ) ದೇವಾಲಯದ ಉದ್ಘಾಟನೆಯು ಬುಧವಾರ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು.

ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ದೇಗುಲದ ಕಟ್ಟಡ ಶಿಥಿಲಗೊಂಡಿದ್ದರಿಂದ ಹೊಸದಾಗಿ ನಿರ್ಮಿಸಲಾಗಿದೆ. ಭಾನುವಾರ ರಾತ್ರಿಯಿಂದಲೇ ಪೂಜಾ ಕಾರ್ಯ ಪ್ರಾರಂಭಗೊಂಡು ಶ್ರೀ ಸೋಮಶೇಖರ ಸ್ವಾಮೀಜಿ ನೇತೃತ್ವದಲ್ಲಿ ನವಗ್ರಹ ಹೋಮ, ಕಳಸ ಪ್ರತಿಷ್ಠಾಪನೆ, ಅಭಿಷೇಕ ನಡೆದವು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಯಾವುದೇ ಕಾರ್ಯಕ್ರಮಗಳು ಯಶಸ್ವಿ ಆಗಬೇಕಿದ್ದರೆ ದೇವರ ಆಶೀರ್ವಾದ ಅಗತ್ಯ. ಗ್ರಾಮಸ್ಥರು ನಮ್ಮ ತಾತನಿಗೆ ನೀಡುವ ಗೌರವವನ್ನು ನನಗೂ ನೀಡಿದ್ದು, ಗ್ರಾಮದ ಅಭಿವೃದ್ಧಿ ನನ್ನ ಜವಾಬ್ದಾರಿ ಎಂದು ಹೇಳಿದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಇಂದು ದೇಶದಲ್ಲಿ ಜಾತಿ ಧರ್ಮಗಳ ನಡುವೆ ಘರ್ಷಣೆ ನಡೆಯುತ್ತಿದೆ. ನಾವೆಲ್ಲರೂ ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಮಾಜಿ ಸಚಿವ ಬಿ. ಶಿವರಾಮ್, ಜಿಪಂ ಸದಸ್ಯೆ ಲತಾ ಮಂಜೇಶ್ವರಿ, ಎಪಿಎಂಸಿ ಸದಸ್ಯ ವಿಷ್ಣುಕುಮಾರ್, ಮುಖಂಡರಾದ ನಟರಾಜ್, ರಾಮಚಂದ್ರೇಗೌಡ, ರಂಗನಾಯ್ಕ, ರಮೇಶ್, ಐ.ಆರ್.ರಮೇಶ್, ವಿಜಯೇಂದ್ರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net