

ಅರಕಲಗೂಡು: ದಕ್ಷಿಣ ಕಾಶಿ ಪ್ರಖ್ಯಾತಿಯ ರಾಮನಾಥಪುರದಲ್ಲಿ ನ.29ರಂದು ನಡೆಯುವ ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಜಾತ್ರೆಯ ಸಡಗರ ಕಳೆಗಟ್ಟಿದೆ.
ಮೈಸೂರು ಸೀಮೆ ಭಾಗದಲ್ಲಿ ನಡೆಯುವ ಮೊದಲ ಜಾತ್ರಾ ಮಹೋತ್ಸವ ಎಂಬ ಪ್ರಸಿದ್ಧಿಗೆ ಪಾತ್ರವಾಗಿರುವ ದೇವಾಲಯಗಳ ಊರು ರಾಮನಾಥಪುರದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ರಥೋತ್ಸವ ನಂತರ ಮಾರ್ಗಶಿರ ಮಾಸದಲ್ಲಿ ಎರಡು ತಿಂಗಳ ಕಾಲ ನಡೆಯುವ ಷಷ್ಠಿ ಜಾತ್ರೆಗೆ ಶ್ರೀಕ್ಷೇತ್ರ ಸಜ್ಜುಗೊಂಡಿದೆ. ದೇವಸ್ಥಾನದಲ್ಲಿ ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಯಾಗಶಾಲಾ ಪ್ರವೇಶ, ಅಂಕುರಾರ್ಪಣ, ಮಯೂರ ವಾಹನೋತ್ಸವ, ಅಶ್ವ ವಾಹನೋತ್ಸವ, ಶೇಷ ವಾಹನೋತ್ಸವ, ಪಂಚಮಿ ಉತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಗಿದೆ.
ಮಂಗಳವಾರ ನಡೆಯಲಿರುವ ಮಹಾ ರಥೋತ್ಸವಕ್ಕೆ 35 ಅಡಿ ಎತ್ತರದ ರಥ ಸಿಂಗರಿಸಲಾಗಿದೆ. ಬೆಳಗ್ಗೆ ಪೂಜಾ ವಿಧಾನಗಳನ್ನು ಪೂರೈಸಿದ ಬಳಿಕ ಅಲಂಕೃತ ರಥದ ಮೇಲೆ ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಜನರ ಸಂಭ್ರಮದ ನಡುವೆ ಮಧ್ಯಾಹ್ನ 12 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಭಕ್ತರು ತೇರು ಎಳೆಯಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಜಾತ್ರಾ ಮಹೋತ್ಸವ ಈ ಬಾರಿ ರಂಗು ಪಡೆದುಕೊಂಡಿದೆ. ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಒಳಾಂಗಣದಲ್ಲಿ ಆಕರ್ಷಕವಾದ ಹೂವಿನ ತೋರಣದಿಂದ ಅಲಂಕರಿಸಲಾಗಿದೆ.
ಷಷ್ಠಿ ಜಾತ್ರೆ ಪ್ರಯುಕ್ತ ದೇವಸ್ಥಾನದ ರಥ ಬೀದಿ ಹಾಗೂ ಶ್ರೀ ರಾಮೇಶ್ವರ ದೇವಾಲಯ ಬೀದಿಯಲ್ಲಿ ವ್ಯಾಪಾರ ಮಳಿಗೆಗಳು ತಲೆ ಎತ್ತಿವೆ. ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಸ್ಥಳೀಯ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಕೈಗೊಳ್ಳಲಾಗಿದೆ.
ದೇವಾಲಯಗಳ ಊರು ಎಂದೇ ಖ್ಯಾತಿಯಾದ ರಾಮನಾಥಪುರದಲ್ಲಿ ಐತಿಹಾಸಿಕ ಶ್ರೀ ರಾಮೇಶ್ವರ, ಅಗಸ್ತ್ಯೇಶ್ವರ, ಪಟ್ಟಾಭಿರಾಮ ಸೇರಿದಂತೆ ಅನೇಕ ದೇವಸ್ಥಾನಗಳಿವೆ. ಇವುಗಳ ಪೈಕಿ ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಅಸಂಖ್ಯಾತ ಭಕ್ತರನ್ನು ಹೊಂದಿರುವುದು ಜಾತ್ರೆಯ ವೈಭವಕ್ಕೆ ಸಾಕ್ಷಿಯಾಗಲಿದೆ.