

ಚನ್ನರಾಯಪಟ್ಟಣ: ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ ಶ್ರೀ ಪ್ರಸನ್ನ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವವು ಜನಪದ ಕಲಾ ತಂಡಗಳೊಂದಿಗೆ ಆಕರ್ಷಕ ಮೆರವಣಿಗೆಯೊಂದಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
74 ವರ್ಷಗಳ ಇತಿಹಾಸ ಉಳ್ಳ ಚನ್ನರಾಯಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿರುವ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಕಲಾವಿದ ರವೀಂದ್ರ ಅವರು ನಿರ್ಮಿಸಿರುವ ವಿಶೇಷವಾದ ಪುಷ್ಪ ಮಂಟಪದಲ್ಲಿ ಗಣೇಶಮೂರ್ತಿಯನ್ನು ಕೂರಿಸಿ ಆಕರ್ಷಕ ಜಾನಪದ ಕಲಾತಂಡಗಳ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಮೆರವಣಿಗೆ ವೀಕ್ಷಿಸಿದರು. ರಾತ್ರಿ ಊರಿನ ಶ್ರೀ ರಾಮವೃತ್ತ ಅಮಾನಿಕೆರೆಯಲ್ಲಿ ಪ್ರಸನ್ನ ಗಣಪತಿಯನ್ನು ವಿಸರ್ಜಿಸಲಾಯಿತು.
ವಿಸರ್ಜನಾ ಮಹೋತ್ಸವದ ಹಿಂದಿನ ದಿನ ಭಾನುವಾರ ಹೋಮ-ಹವನ ನಡೆಯಿತು. ಲೋಕ ಕಲ್ಯಾಣಾರ್ಥವಾಗಿ ನಡೆಸಿದ ಹೋಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ದಂಪತಿ, ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ, ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್. ಅಶೋಕ್ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಕೆ.ಕೃಷ್ಣ, ಅಧ್ಯಕ್ಷ ಸಿ.ಎನ್.ಅಶೋಕ್, ಉಪಧ್ಯಕ್ಷ ನಂಜುಂಡ ಮೈಮ್, ಕಾರ್ಯದರ್ಶಿ ಸಿ.ವೈ.ಸತ್ಯನಾರಾಯಣ, ಖಜಾಂಚಿ ಸಿ.ಎಸ್. ಮನೋಹರ್, ಸಹ ಕಾರ್ಯದರ್ಶಿ ಮಹದೇವ್, ಸಹ ಖಜಾಂಚಿ ಲಕ್ಷ್ಮೀನಾರಾಯಣ ಗುಪ್ತ, ಪದಾಧಿಕಾರಿಗಳು, ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಎನ್.ವೆಂಕಟೇಶ್, ಸಿ.ಬಿ.ಗಂಗಾಧರ್, ಜಯಪಾಲ್, ತಾಲೂಕಿನ ಗಣ್ಯರು ಉಪಸ್ಥಿತರಿದ್ದರು.