

ಮೈಸೂರು: ಶ್ರೀ ಪಂಚಶನೈಶ್ಚರ ಸ್ವಾಮಿ ಆರಾಧನಾ ಮತ್ತು ಮಲೆಯಾಳದ ಹುತ್ತೂರಮ್ಮನ ಜಾತ್ರೆ ಸಡಗರದಿಂದ ನಗರದಲ್ಲಿ ಭಾನುವಾರ ನೆರವೇರಿತು.
ಸಿದ್ಧಾರ್ಥನಗರದ ಮೋಕ್ಷಾ ಮಾರ್ಗದಲ್ಲಿನ ಮಲೆಯಾಳದಮ್ಮನ ದೇವಸ್ಥಾನದಿಂದ ಶ್ರೀ ಪಂಚಶನೈಶ್ಚರ ಸ್ವಾಮಿ ಮತ್ತು ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಾಗಿ ಲಲಿತಮಹಲ್ ಹೋಟೆಲ್ ಬಳಿ ಹಸಿರು ಚಪ್ಪರದ ಆವರಣ ತಲುಪಿತು.
ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ನಗಾರಿ ಹಾಗೂ ಬೊಂಬೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಜತೆಗೆ ತಂಬಿಟ್ಟು ಮತ್ತು ಕಳಸ ಹೊತ್ತ ಮಹಿಳೆಯರು ಪಾಲ್ಗೊಂಡು ಮೆರವಣಿಗೆಗೆ ಹೊಳಪು ತಂದರು.
ಬಳಿಕ ವಿವಿಧ ಧಾರ್ಮಿಕ ಕೈಂಕರ್ಯಗಳು, ಮಕ್ಕಳ ಮುಡಿ, ನಾಮಕರಣ, ಸ್ತ್ರೀಯರ ಪಂಚಮುಡಿ ನಡೆಯಿತು. ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ವೇದಿಕೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಗಳಿಗೆ ಕೈ ಮುಗಿದು ಪ್ರಾರ್ಥಿಸಿದರು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ಶ್ರೀನಿಶ್ಚಲಾನಂದ ಸ್ವಾಮೀಜಿ, ಪ್ರಸ್ತುತ ನಗರ ಪ್ರದೇಶಗಳಲ್ಲಿ ಜಾತ್ರಾ ಸಂಪ್ರದಾಯಗಳು ಕಡಿಮೆಯಾಗಿವೆ. ಇಂತಹ ಸಂದರ್ಭದಲ್ಲಿ ಕಳೆದ 33 ವರ್ಷಗಳಿಂದ ಶ್ರೀ ಪಂಚಶನೈಶ್ಚರ ಸ್ವಾಮಿ ಆರಾಧನೆ ಮತ್ತು ಮಲೆಯಾಳದ ಹುತ್ತೂರಮ್ಮನ ಜಾತ್ರೆಯನ್ನು ಅದ್ದೂರಿಯಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ.ದೇವರಾಜ್, ಕರಾಮುವಿ ಪರೀಕ್ಷಾಂಗ ಕುಲಸಚಿವ ಪ್ರೊ.ವಿಶ್ವನಾಥ, ಪರಮಹಂಸ ಯೋಗ ವಿದ್ಯಾಲಯದ ಶಿವಪ್ರಕಾಶ್ ಇನ್ನಿತರರು ಪಾಲ್ಗೊಂಡಿದ್ದರು.